×
Ad

IPL 2026 | ರಾಜಸ್ಥಾನದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 5 ವಿಕೆಟ್ ಗಳ ಜಯ

Update: 2026-05-17 23:47 IST

Photo : PTI

ಹೊಸದಿಲ್ಲಿ, ಮೇ 17: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ರವಿವಾರ ನಡೆದ ಎರಡನೇ ಪಂದ್ಯದಲ್ಲಿ ಅಭಿಶೇಕ್ ಪೊರೆಲ್ (31 ಎಸೆತಗಳಲ್ಲಿ 51 ರನ್) ಮತ್ತು ಕೆ.ಎಲ್. ರಾಹುಲ್ (42 ಎಸೆತಗಳಲ್ಲಿ 56) ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಐದು ವಿಕೆಟ್‌ ಗಳಿಂದ ರೋಮಾಂಚಕಾರಿಯಾಗಿ ಸೋಲಿಸಿತು.

ಈ ಮೂಲಕ ರಾಜಸ್ಥಾನ ರಾಯಲ್ಸ್‌ ನ ಪ್ಲೇಆಫ್ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ. ಅದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇಆಫ್ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿದೆ.

ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಜಯಕ್ಕೆ 194 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್, ಇನ್ನು ನಾಲ್ಕು ಎಸೆತಗಳು ಬಾಕಿಯಿರುವಂತೆಯೇ ಐದು ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತು.

ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 34 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು.

ಹದಿಹರೆಯದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ ಮೂರು ಸಿಕ್ಸರ್‌ ಗಳನ್ನು ಒಳಗೊಂಡ 46 ರನ್ ಸಿಡಿಸಿದರು. ಇದರೊಂದಿಗೆ ಪ್ರಸಕ್ತ ಐಪಿಎಲ್‌ನಲ್ಲಿ ಅವರ ಸಿಕ್ಸರ್‌ಗಳ ಸಂಖ್ಯೆ 43ಕ್ಕೇರಿತು. ಈ ಮೂಲಕ ಒಂದು ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ ಗಳನ್ನು ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಅವರು ನಿರ್ಮಿಸಿದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ಅಭಿಷೇಕ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಮಿಚೆಲ್ ಸ್ಟಾರ್ಕ್ ನಾಲ್ಕು ಹಾಗೂ ಲುಂಗಿ ಎಂಗಿಡಿ ಮತ್ತು ಮಾಧವ್ ತಿವಾರಿ ತಲಾ ಎರಡು ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್ (20 ಓವರ್‌ಗಳಲ್ಲಿ) 193-8

ಯಶಸ್ವಿ ಜೈಸ್ವಾಲ್ 12, ವೈಭವ್ ಸೂರ್ಯವಂಶಿ 46, ಧ್ರುವ ಜುರೆಲ್ 53, ರಿಯಾನ್ ಪರಾಗ್ 51

ಮಿಚೆಲ್ ಸ್ಟಾರ್ಕ್ 4-40, ಲುಂಗಿ ಎಂಗಿಡಿ 2-24, ಮಾಧವ್ ತಿವಾರಿ 2-27

ಡೆಲ್ಲಿ ಕ್ಯಾಪಿಟಲ್ಸ್ (19.2 ಓವರ್‌ ಗಳಲ್ಲಿ) 197-5

ಅಭಿಶೇಕ್ ಪೊರೆಲ್ 51, ಕೆ.ಎಲ್. ರಾಹುಲ್ 56, ಅಕ್ಷರ್ ಪಟೇಲ್ 34*

ಜೋಫ್ರಾ ಆರ್ಚರ್ 2-35, ಬೃಜೇಶ್ ಶರ್ಮಾ 2-44

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News