×
Ad

IPL 2026 | ಮಾರ್ಷ್ ಅಬ್ಬರಕ್ಕೆ ಮಣಿದ ಸಿಎಸ್‌ಕೆ; LSGಗೆ 7 ವಿಕೆಟ್‌ ಜಯ

Update: 2026-05-15 23:38 IST

Image Credit: PTI

ಲಕ್ನೊ: ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 2026ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧ 7 ವಿಕೆಟ್‌ ಗಳ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 188 ರನ್‌ಗಳ ಗುರಿ ಬೆನ್ನಟ್ಟಿದ ಎಲ್‌ಎಸ್‌ಜಿ ತಂಡಕ್ಕೆ ಮಾರ್ಷ್ ಬಿರುಸಿನ ಆರಂಭ ನೀಡಿದರು. ಅವರು ಕೇವಲ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್‌ ಗಳ ನೆರವಿನಿಂದ 90 ರನ್‌ ಸಿಡಿಸಿ ಎದುರಾಳಿ ಬೌಲರ್‌ ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಅವರ ಆಕ್ರಮಣಕಾರಿ ಆಟದ ಪರಿಣಾಮ ಎಲ್‌ಎಸ್‌ಜಿ ತಂಡ ಗುರಿಯನ್ನು ಸುಲಭವಾಗಿ ತಲುಪಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡಕ್ಕೆ ಆರಂಭದಲ್ಲೇ ಆಕಾಶ್ ಸಿಂಗ್ ಆಘಾತ ನೀಡಿದರು. ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಹಾಗೂ ಉರ್ವಿಲ್ ಪಟೇಲ್ ಅವರನ್ನು ಔಟ್ ಮಾಡಿದ ಅವರು, ನಾಲ್ಕು ಓವರ್‌ ಗಳಲ್ಲಿ 26 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.

ಆರಂಭಿಕ ಕುಸಿತದ ನಡುವೆಯೂ ಕಾರ್ತಿಕ್ ಶರ್ಮಾ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಆಸರೆಯಾದರು. ಡೆವಾಲ್ಡ್ ಬ್ರೆವಿಸ್ ಜೊತೆ 70 ರನ್‌ಗಳ ಜೊತೆಯಾಟ ಕಟ್ಟಿದ ಅವರು, 42 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 71 ರನ್‌ ಗಳಿಸಿದರು. ಕೊನೆಯಲ್ಲಿ ಶಿವಂ ದುಬೆ 16 ಎಸೆತಗಳಲ್ಲಿ ಔಟಾಗದೆ 32 ರನ್‌ ಸೇರಿಸಿ ತಂಡದ ಮೊತ್ತವನ್ನು 5 ವಿಕೆಟ್‌ಗೆ 187 ರನ್‌ಗೆ ಕೊಂಡೊಯ್ದರು.

ಆದರೆ ಗುರಿ ಬೆನ್ನಟ್ಟಿದ ಎಲ್‌ಎಸ್‌ಜಿ ಪರ ಮಾರ್ಷ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಚೆನ್ನೈ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದ ಅವರು, ತಂಡವನ್ನು ಸುಲಭ ಜಯದತ್ತ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಎಲ್‌ಎಸ್‌ಜಿ ತಂಡ ಪ್ಲೇಆಫ್‌ ಪ್ರವೇಶದ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News