IPL 2026 | ಪಂಜಾಬ್ ವಿರುದ್ಧ RCBಗೆ 23 ರನ್ ಗಳ ಜಯ; ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವೆಂಬ ಹೆಗ್ಗಳಿಕೆ
Image Credit: PTI
ಧರ್ಮಶಾಲಾ: ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು, ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿ ಐಪಿಎಲ್ 2026ರ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿ ಹೊರಹೊಮ್ಮಿತು.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್‌ಗೆ 222 ರನ್ ಗಳನ್ನು ಗಳಿಸಿತು.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಮಧ್ಯಮ ಓವರ್‌ಗಳಲ್ಲಿ ವೇಗವಾಗಿ ರನ್ ಕಲೆಹಾಕಿದ ಈ ಜೋಡಿ, ಪಂಜಾಬ್ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಇಬ್ಬರೂ ಅರ್ಧಶತಕಗಳನ್ನು ದಾಖಲಿಸಿ ತಂಡಕ್ಕೆ ಬಲವಾದ ಮೊತ್ತ ಒದಗಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಪ್ರತಿರೋಧ ತೋರಿದರೂ, ಆರ್‌ಸಿಬಿ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿತು. ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಪಂಜಾಬ್ ತಂಡವು ಗುರಿ ತಲುಪಲು ವಿಫಲವಾಯಿತು. 20 ಓವರುಗಳಲ್ಲಿ 8 ವಿಕೆಟ್ ಗೆ 199 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಲ್‌ರೌಂಡ್ ಪ್ರದರ್ಶನ ನೀಡಿದ ಆರ್‌ಸಿಬಿ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಗೆಲುವಿನೊಂದಿಗೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಪಂಜಾಬ್ ಕಿಂಗ್ಸ್‌ಗೆ ಇದು ಸತತ ಆರನೇ ಸೋಲಾಗಿದ್ದು, ತಂಡದ ಮುಂದಿನ ಹಾದಿ ಕಠಿಣವಾಗಲಿದೆ.