FIFA World Cup | ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡಗಳ ನಡುವಿನ ಕರಾಳ ಇತಿಹಾಸ ಬದಲಾಗುವುದೆ?
Photo : x@FIFAWorldCup
24 ವರ್ಷಗಳ ಬಳಿಕ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ಜಾಗತಿಕ ವೇದಿಕೆಯಲ್ಲಿ ಪರಸ್ಪರರನ್ನು ಎದುರಿಸುತ್ತಿವೆ. ಕರಾಳ ಇತಿಹಾಸವಿರುವ ಈ ತಂಡಗಳ ನಡುವಿನ ಸೆಮಿಫೈನಲ್ ರೋಮಾಂಚಕಾರಿಯಾಗಿರುವುದು ಸಹಜವೇ ಆಗಿದೆ.
ಡಿಯಾಗೊ ಮರಡೋನಾ ಅವರು ತಮ್ಮ ಕುಪ್ರಸಿದ್ಧ ‘ಹ್ಯಾಂಡ್ ಆಫ್ ಗಾಡ್’ ಪ್ರಕರಣಕ್ಕೆ ಎಂದಿಗೂ ಪಶ್ಚಾತ್ತಾಪಪಡಲಿಲ್ಲ. ತಾನು ಮೋಸ ಮಾಡಿಲ್ಲ ಎಂದು ಭಾವಿಸಿದ್ದರಿಂದ ಅಲ್ಲ, ಆ ಗೋಲು ಇಂಗ್ಲೆಂಡ್ ವಿರುದ್ಧ ಗಳಿಸಿದ್ದ ಕಾರಣದಿಂದ ಪಶ್ಚಾತ್ತಾಪವಿಲ್ಲ ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
1986ರ ವಿಶ್ವಕಪ್ ನಲ್ಲಿ ಅವರು ಹೊಡೆದ ಎರಡು ಗೋಲುಗಳಲ್ಲಿ ಅತ್ಯುತ್ತಮವಾದುದನ್ನು ಪಕ್ಕಕ್ಕಿಟ್ಟು, ‘ಕೈಯಿಂದ ಹೊಡೆದ ಗೋಲನ್ನೇ ಹೆಚ್ಚು ಇಷ್ಟಪಡುತ್ತೇನೆ’ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದರು. ಅದಕ್ಕೆ ಕಾರಣವನ್ನೂ ಅವರು ವಿವರಿಸಿದ್ದಾರೆ. ‘ಇಂಗ್ಲಿಷರ ಕೈಯಿಂದ ಪರ್ಸ್ ಕದಿಯುವಂತಹ ಕ್ಷಣವದು’ ಎಂದು ಅವರು ಹೇಳಿದ್ದರು. ಫಾಕ್ಲ್ಯಾಂಡ್ ಯುದ್ಧವು ಕೇವಲ ನಾಲ್ಕು ವರ್ಷಗಳಷ್ಟು ಹಳೆಯದಾಗಿದ್ದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ನೋವು ಮತ್ತು ಗಾಯಗಳನ್ನು ಅನುಭವಿಸುತ್ತಿದ್ದವು. ಹೀಗಾಗಿ ಮರಡೋನಾ ಈ ವಿಜಯವನ್ನು ‘ಸೇಡು’ ಎಂದು ಕರೆದಿದ್ದರು.
‘ಮಾಲ್ವಿನಸ್ ಯುದ್ಧಕ್ಕೂ ಫುಟ್ಬಾಲ್ ಗೂ ಯಾವುದೇ ಸಂಬಂಧವಿಲ್ಲ ಎಂದು ಪಂದ್ಯಕ್ಕೂ ಮೊದಲು ಹೇಳಿದ್ದರೂ, ಅವರು ಅಲ್ಲಿ ಬಹಳಷ್ಟು ಅರ್ಜೆಂಟೀನಾದ ಹುಡುಗರನ್ನು ಕೊಂದಿದ್ದಾರೆ. ಅವರನ್ನು ಸಣ್ಣ ಪಕ್ಷಿಗಳಂತೆ ಕೊಂದಿದ್ದಾರೆ ಎಂದು ನಮಗೆ ಗೊತ್ತು. ಹೀಗಾಗಿ ಅದು ಸೇಡು ತೀರಿಸಿಕೊಳ್ಳುವಂತಿತ್ತು’ ಎಂದು ಅವರು ಹೇಳಿದ್ದಾರೆ.
ಕ್ರೀಡೆಗಳಲ್ಲಿ ವಿವಿಧ ರೀತಿಯ ಶತ್ರುತ್ವಗಳಿವೆ. ಕೆಲವು ರಾಜಕೀಯ ಮತ್ತು ಸಾಂಸ್ಕೃತಿಕ ವೈರತ್ವದಿಂದ ವ್ಯಾಖ್ಯಾನಿಸಲ್ಪಟ್ಟಿವೆ. ಕೆಲವು ವಸಾಹತುಶಾಹಿ ಘರ್ಷಣೆಯಿಂದ ಬೆಂದ ದ್ವೇಷದ ಫಲ. ಮತ್ತೆ ಕೆಲವು ಕ್ರೀಡಾ ಸಿದ್ಧಾಂತಗಳ ಘರ್ಷಣೆಯ ಫಲ. ಬುಧವಾರ ಅಟ್ಲಾಂಟದಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯವು 24 ವರ್ಷಗಳ ಬಳಿಕ ದೊಡ್ಡ ವೇದಿಕೆಯಲ್ಲಿ ಈ ತಂಡಗಳು ಪರಸ್ಪರ ಎದುರಾಗುವ ಸನ್ನಿವೇಶವಾಗಿದೆ. ಹೀಗಾಗಿ ಪಂದ್ಯ ರೋಮಾಂಚಕಾರಿಯಾಗಿ ಇರುವ ನಿರೀಕ್ಷೆಯಿದೆ.
ಮರಡೋನಾ ಕೈಯಿಂದ ಗೋಲು ಬಾರಿಸಿರುವುದನ್ನು ಇಂಗ್ಲೆಂಡ್ ಮರೆತಿಲ್ಲ, ಕ್ಷಮಿಸಿಯೂ ಇಲ್ಲ. ಮೆಕ್ಸಿಕೊ ವಿರುದ್ಧದ 16ರ ಘಟ್ಟದ 3–2 ಗೆಲುವು ಇಂಗ್ಲೆಂಡ್ ಗೆ ಶಾಪವಿಮೋಚನೆಯಾದಂತಹ ಸ್ಥಿತಿಯಾಗಿತ್ತು. ಆದರೆ ನಿಜವಾದ ಶಾಪವಿಮೋಚನೆಯಾಗಬೇಕಿದ್ದರೆ, ಅವರು ಅಟ್ಲಾಂಟದಲ್ಲಿ ನಡೆಯುವ ಪಂದ್ಯದಲ್ಲಿ ಮೆಸ್ಸಿಯ ತಂಡವನ್ನು ಮನೆಗೆ ಕಳುಹಿಸಬೇಕಿದೆ. 1998ರಲ್ಲಿ ಡಿಯಾಗೊ ಸಿಮಿಯೋನೆಗೆ ಫೌಲ್ ಮಾಡಿದ ಕಾರಣಕ್ಕೆ ಡೇವಿಡ್ ಬೆಕ್ಹ್ಯಾಮ್ಗೆ ರೆಡ್ ಕಾರ್ಡ್ ದೊರೆತ ಸನ್ನಿವೇಶವೂ ಅರ್ಜೆಂಟೀನಾ–ಇಂಗ್ಲೆಂಡ್ ನಡುವಿನ ಮತ್ತೊಂದು ಕಪ್ಪು ಅಧ್ಯಾಯವಾಗಿದೆ.
ವರ್ಷಗಳ ಬಳಿಕ ಸಿಮಿಯೋನೆ ತಾವು ರೆಫ್ರಿಯನ್ನು ವಂಚಿಸಿರುವುದನ್ನು ಒಪ್ಪಿಕೊಂಡಿದ್ದರು. ‘ನಾನು ಅವರನ್ನು ಎದುರಿಸಿದೆ. ಇಬ್ಬರೂ ನೆಲಕ್ಕೆ ಬಿದ್ದೆವು. ಎದ್ದು ನಿಲ್ಲಲು ಪ್ರಯತ್ನಿಸಿದಾಗ ಹಿಂದಿನಿಂದ ಅವರು ನನಗೆ ಒದ್ದರು. ನಾನು ಅದರ ಲಾಭ ಪಡೆದೆ. ಯಾವುದೇ ವ್ಯಕ್ತಿಯೂ ಅದೇ ರೀತಿ ಲಾಭ ಪಡೆಯುತ್ತಿದ್ದರು ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದರು.
ಆದರೆ 2002ರ ಪಂದ್ಯದಲ್ಲಿ ಏಕೈಕ ಗೋಲು ಬಾರಿಸುವ ಮೂಲಕ ಬೆಕ್ಹ್ಯಾಮ್ ಸೇಡು ತೀರಿಸಿಕೊಂಡಿದ್ದರು. ಅದೇ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಜಾಗತಿಕ ವೇದಿಕೆಯ ಕೊನೆಯ ಪಂದ್ಯವಾಗಿತ್ತು.
1966ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯದ ವೇಳೆ ನಡೆದ ಗಲಾಟೆಯ ನಂತರ ಫುಟ್ಬಾಲ್ ಪಂದ್ಯಗಳಲ್ಲಿ ಕಾರ್ಡ್ಗಳನ್ನು ಪರಿಚಯಿಸಲಾಗಿತ್ತು. ಆ ಪಂದ್ಯವನ್ನು ಇಂಗ್ಲೆಂಡ್ 1–0ರಿಂದ ಗೆದ್ದುಕೊಂಡಿದ್ದರೂ, ಅದು ಬಹಳ ಚರ್ಚೆಗೆ ಒಳಗಾಗಿತ್ತು. ಕಳೆದ ಶುಕ್ರವಾರ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಅರ್ಜೆಂಟೀನಾದ ಮಾಜಿ ನಾಯಕ ಅಂಟೋನಿಯೊ ರಾಟಿನ್ ಅವರನ್ನು ಎರಡು ನಿಮಿಷಗಳ ಅಂತರದಲ್ಲಿ ಎರಡು ಅಪರಾಧಗಳಿಗೆ ಮೈದಾನದಿಂದ ಹೊರಗೆ ಕಳುಹಿಸಿದಾಗ, ಅವರು ಮೈದಾನ ಬಿಡಲು ನಿರಾಕರಿಸಿ ರೆಫ್ರಿಯ ಶರ್ಟ್ ಎಳೆದು ಹೊಡೆಯುವುದಾಗಿ ಬೆದರಿಕೆ ಹಾಕಿದ್ದರು.
ಆಟ ಮುಗಿದ ಬಳಿಕ ಆಟಗಾರರು ಪರಸ್ಪರರನ್ನು ತಳ್ಳಿಕೊಂಡ ಕಾರಣ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಅವರಲ್ಲೊಬ್ಬರು ಸುರಂಗದಲ್ಲಿ ಮೂತ್ರ ವಿಸರ್ಜಿಸಿದ್ದರು. ‘ರೆಫ್ರಿ ಇಂಗ್ಲೆಂಡ್ನ ಶರ್ಟ್ ಧರಿಸಿ ಆಡಿದ್ದರು’ ಎಂದು ರಾಟಿನ್ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಬರ್ಟೊ ಫೆರರೊ ರೆಫ್ರಿಯ ಮೇಲೆ ಹಲ್ಲೆ ನಡೆಸಿದ್ದರು ಮತ್ತು ಎರ್ಮಿಂಡೊ ಒನೆಗಾ ಫಿಫಾ ಉಪಾಧ್ಯಕ್ಷ ಹ್ಯಾರಿ ಕ್ಯಾವನ್ ಅವರ ಮುಖಕ್ಕೆ ಉಗುಳಿದ್ದರು. ಅರ್ಜೆಂಟೀನಾದ ಆಟಗಾರರು ಇಂಗ್ಲೆಂಡ್ ಡ್ರೆಸ್ಸಿಂಗ್ ಕೋಣೆಗಳತ್ತ ಕುರ್ಚಿಗಳನ್ನು ಎಸೆದಿದ್ದರು. ಪೊಲೀಸರು ತಡೆಯಲು ಬಂದಾಗ ಅವರ ಮೇಲೆಯೂ ಕಿತ್ತಳೆಗಳನ್ನು ಎಸೆಯಲಾಗಿತ್ತು. ರೆಫ್ರಿಗಳು ಇಂಗ್ಲೆಂಡ್ ಅನ್ನು ಬೆಂಬಲಿಸುತ್ತಾರೆ ಎಂಬ ಆರೋಪ ಆಗಲೇ ವ್ಯಾಪಕವಾಗಿ ವ್ಯಕ್ತವಾಗಿತ್ತು.