×
Ad

England ಟೆಸ್ಟ್ ತಂಡದ ಕೋಚ್ ಹುದ್ದೆ; ರಾಹುಲ್ ದ್ರಾವಿಡ್ ಹೆಸರು ಚರ್ಚೆಯಲ್ಲಿ: ವರದಿ

RCB ಕೋಚ್ ಆಂಡಿ ಫ್ಲವರ್ ಕೂಡ ರೇಸ್ ನಲ್ಲಿ

Update: 2026-07-13 07:15 IST

ರಾಹುಲ್ ದ್ರಾವಿಡ್ Photo credit : PTI

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರು ಚರ್ಚೆಗೆ ಬಂದಿದೆ ಎಂದು Daily Telegraph ವರದಿ ಮಾಡಿದೆ.

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1–2 ಅಂತರದ ಸೋಲು ಅನುಭವಿಸಿದ ಬಳಿಕ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ ವರ್ಷ ನಡೆಯಲಿರುವ ಆಶಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಟೆಸ್ಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ನಿರ್ಧರಿಸಿದೆ. ಆದರೆ, ಮೆಕಲಮ್ ಇಂಗ್ಲೆಂಡ್‌ ನ ಏಕದಿನ ಹಾಗೂ T20 ತಂಡಗಳ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಈ ಹಿನ್ನೆಲೆಯಲ್ಲಿ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಪರಿಗಣಿಸಲಾಗುತ್ತಿರುವ ಹೆಸರುಗಳಲ್ಲಿ ದ್ರಾವಿಡ್ ಅವರೂ ಒಬ್ಬರಾಗಿದ್ದಾರೆ. 2024ರ ಟಿ20 ವಿಶ್ವಕಪ್‌ ನಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ತಂಡವನ್ನು ಮುನ್ನಡೆಸಿದ್ದ ದ್ರಾವಿಡ್, ಆಟದ ಬಗ್ಗೆ ಹೊಂದಿರುವ ಆಳವಾದ ತಿಳುವಳಿಕೆ ಮತ್ತು ಸಮತೋಲಿತ ಕೋಚಿಂಗ್ ಶೈಲಿಯಿಂದಾಗಿ ಆಕರ್ಷಕ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಪೂರ್ಣಾವಧಿಯ ಮುಖ್ಯ ಕೋಚ್ ಆಗುವ ಆಸಕ್ತಿ ದ್ರಾವಿಡ್ ಅವರಿಗೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೂ, ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಯು ಅವರಿಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಕಲ್ಪಿಸುವುದರ ಜೊತೆಗೆ, ತಮಗೆ ಅಚ್ಚುಮೆಚ್ಚಿನ ಟೆಸ್ಟ್ ಕ್ರಿಕೆಟ್‌ನೊಂದಿಗೆ ನಂಟು ಮುಂದುವರಿಸಲು ನೆರವಾಗಬಹುದು. ಈ ಕಾರಣಕ್ಕೆ ಅವರ ಆಸಕ್ತಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹುದ್ದೆಯ ಪ್ರಮುಖ ಹೆಸರುಗಳಲ್ಲಿ ಝಿಂಬಾಬ್ವೆಯ ಮಾಜಿ ನಾಯಕ, RCB ಹಾಗೂ ಇಂಗ್ಲೆಂಡ್‌ ನ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ ಕೂಡ ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಮೂರು ಆಶಸ್ ಸರಣಿಗಳನ್ನು ಗೆದ್ದು, ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಫ್ರಾಂಚೈಸಿ ಕ್ರಿಕೆಟ್‌ ನಲ್ಲೂ ಯಶಸ್ಸು ಕಂಡಿರುವ ಫ್ಲವರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪ್ರಸ್ತುತ ಗ್ಲಾಮೊರ್ಗನ್ ತಂಡದ ಮುಖ್ಯ ಕೋಚ್ ಆಗಿರುವ ಇಂಗ್ಲೆಂಡ್‌ ನ ಮಾಜಿ ಸ್ಪಿನ್ನರ್ ರಿಚರ್ಡ್ ಡಾಸನ್ ಅವರ ಹೆಸರೂ ಗಂಭೀರವಾಗಿ ಪರಿಗಣನೆಯಲ್ಲಿದೆ. ಕೌಂಟಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಅವರ ಕೋಚಿಂಗ್ ಅನುಭವ ಮತ್ತು ಸಾಮರ್ಥ್ಯ ಗಮನ ಸೆಳೆದಿದೆ.

ಇದಲ್ಲದೆ, ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ, ಇಂಗ್ಲೆಂಡ್ ಲಯನ್ಸ್ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಫ್ಲಿಂಟಾಫ್, ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಹೆಸರುಗಳೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News