FIFA 2026 | ಪ್ರಿ-ಕ್ವಾ.ಫೈನಲ್‌ಗೆ ಲಗ್ಗೆಯಿಟ್ಟ ಕೊಲಂಬಿಯ : ಘಾನಾ ತಂಡಕ್ಕೆ 0-1 ಅಂತರದ ಸೋಲು
Photo Credit : NDTV
ಕಾನ್ಸಾಸ್ ಸಿಟಿ, ಜು. 4: ಫಿಫಾ ವಿಶ್ವಕಪ್‌ನ ಅಂತಿಮ 32ರ ಸುತ್ತಿನ ಪಂದ್ಯವೊಂದರಲ್ಲಿ ಶುಕ್ರವಾರ ಕೊಲಂಬಿಯ ತಂಡವು ಘಾನಾ ತಂಡವನ್ನು ಏಕೈಕ ಗೋಲಿನಿಂದ ಸೋಲಿಸಿ ಪ್ರಿಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಪಂದ್ಯದ ಏಕೈಕ ಗೋಲನ್ನು ಕೊಲಂಬಿಯದ ಜಾನ್ ಅರಿಯಸ್ ಬಾರಿಸಿದರು.
14ನೇ ನಿಮಿಷದಲ್ಲಿ, ಲೂಯಿಸ್ ಸುವಾರೆಝ್‌ರಿಂದ ಚೆಂಡನ್ನು ಪಡೆದ ಅರಿಯಸ್ ಅತ್ಯಂತ ಸಮೀಪದಿಂದ ಗೋಲು ಬಾರಿಸಿದರು. ಗಾಯಗೊಂಡಿರುವ ಜಾನ್ ಕೋರ್ಡೊಬರಿಗೆ ಬದಲಿಯಾಗಿ ಮೈದಾನಕ್ಕೆ ಆಗಷ್ಟೇ ಸುವಾರೆಝ್ ಬಂದಿದ್ದರು.
56ನೇ ನಿಮಿಷದಲ್ಲಿ, ಕೊಲಂಬಿಯದ ಲೂಯಿಸ್ ಡಿಯಾಝ್ ಸಿಡಿಸಿದ ಚೆಂಡು ಗೋಲುಪೆಟ್ಟಿಗೆಯನ್ನು ಸೇರಿತಾದರೂ, ರೆಫರಿ ಅದನ್ನು ಆಫ್‌ಸೈಡ್ ಎಂಬುದಾಗಿ ಘೋಷಿಸಿದರು.
ಪಂದ್ಯದ ಹೆಚ್ಚಿನ ಅವಧಿಯಲ್ಲಿ ಕೊಲಂಬಿಯವೇ ಪ್ರಾಬಲ್ಯ ಸಾಧಿಸಿತ್ತು. ಘಾನ ಗೋಲ್‌ಕೀಪರ್ ಲಾರೆನ್ಸ್ ಆಟಿ ಝಿಗಿ ಮೂರು ಸಂಭಾವ್ಯ ಗೋಲುಗಳನ್ನು ತಡೆದರು.
ಮಂಗಳವಾರ ವ್ಯಾಂಕೋವರ್‌ನಲ್ಲಿ ನಡೆಯಲಿರುವ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೊಲಂಬಿಯ ತಂಡವು ಸ್ವಿಟ್ಟರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳು ಆರಂಭ
2026ರ ಆವೃತ್ತಿಯ ಫಿಫಾ ವಿಶ್ವಕಪ್‌ನ ಅಂತಿಮ 32ರ ಸುತ್ತಿನ ಪಂದ್ಯಗಳು ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ ಶನಿವಾರ ಬೆಳಗ್ಗೆ) ಮುಕ್ತಾಯಗೊಂಡಿವೆ.
ಅಂತಿಮ 16ರ ಸುತ್ತಿನ ಪಂದ್ಯಗಳು ಅಥವಾ ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳು ಶನಿವಾರ ಬೆಳಗ್ಗೆ (ಭಾರತೀಯ ಕಾಲಮಾನ ಶನಿವಾರ ರಾತ್ರಿ) ಆರಂಭಗೊಂಡಿವೆ.
ಪ್ರಿಕ್ವಾರ್ಟರ್‌ಫೈನಲ್ ಹಂತಕ್ಕೆ ತೇರ್ಗಡೆಯಾಗಿರುವ 16 ತಂಗಳು ಇಂತಿವೆ: ಕೆನಡ, ಮೊರಾಕ್ಕೊ, ಪರಾಗ್ವೆ, ಫ್ರಾನ್ಸ್, ಬ್ರೆಝಿಲ್, ನಾರ್ವೆ, ಮೆಕ್ಸಿಕೊ, ಇಂಗ್ಲೆಂಡ್, ಪೋರ್ಚುಗಲ್, ಸ್ಪೇನ್, ಅಮೆರಿಕ, ಬೆಲ್ಜಿಯಮ್, ಅರ್ಜೆಂಟೀನ, ಈಜಿಪ್ಟ್, ಸ್ವಿಟ್ಸರ್‌ಲ್ಯಾಂಡ್ ಮತ್ತು ಕೊಲಂಬಿಯಾ.