×
Ad

FIFA 2026 | ಪ್ರಿ-ಕ್ವಾ.ಫೈನಲ್ ತಲುಪಿದ ಈಜಿಪ್ಟ್ : ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಕ್ಕೆ ಸೋಲು

Update: 2026-07-04 21:29 IST

Photo Credit : Xinhua

ಡಲ್ಲಾಸ್, ಜು. 4: ಫಿಫಾ ವಿಶ್ವಕಪ್‌ನಲ್ಲಿ ಶುಕ್ರವಾರ ಆಸ್ಟ್ರೇಲಿಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಮಣಿಸಿರುವ ಈಜಿಪ್ಟ್ ಪ್ರಿಕ್ವಾರ್ಟರ್‌ಫೈನಲ್ ತಲುಪಿದೆ. ಅದು ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ನಾಕೌಟ್ ಪಂದ್ಯವನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.

ಅಂತಿಮ 32ರ ಸುತ್ತಿನ ಪಂದ್ಯದಲ್ಲಿ, ಈಜಿಪ್ಟ್ ಮತ್ತು ಅದರ ಫಾರ್ಮ್‌ನಲ್ಲಿಲ್ಲದ ನಾಯಕ ಸಲಾ ಹಲವಾರು ಉತ್ತಮ ಅವಕಾಶಗಳನ್ನು ಕೈಚೆಲ್ಲಿದರು. ಹಾಗಾಗಿ, ನಿಗದಿತ ಅವಧಿ ಮುಗಿದಾಗ ಪಂದ್ಯವು 1-1ರ ಸಮಬಲದಲ್ಲಿ ಕೊನೆಗೊಂಡಿತು.

ಫಲಿತಾಂಶವನ್ನು ನಿರ್ಧರಿಸಲು ನೀಡಲಾದ 30 ನಿಮಿಷಗಳ ಹೆಚ್ಚುವರಿ ಸಮಯದಲ್ಲಿಯೂ ಯಾವುದೇ ಗೋಲುಗಳು ದಾಖಲಾಗದೆ ಬಿಕ್ಕಟ್ಟು ಹಾಗೆಯೇ ಮುಂದುವರಿಯಿತು.

ಅಂತಿಮವಾಗಿ, ಬಿಕ್ಕಟ್ಟು ಮುರಿಯಲು ಪೆನಾಲ್ಟಿ ಶೂಟೌಟ್ ಅನಿವಾರ್ಯವಾದಾಗ, ಈಜಿಪ್ಟ್ ಎಲ್ಲಾ ನಾಲ್ಕು ಗೋಲುಗಳನ್ನು ಬಾರಿಸಿತು ಹಾಗೂ ಆಸ್ಟ್ರೇಲಿಯಕ್ಕೆ ಕೇವಲ ಎರಡು ಗೋಲು ಪೆನಾಲ್ಟಿಗಳನ್ನು ಮಾತ್ರ ಗೋಲಾಗಿ ಪರಿವರ್ತಿಸಲು ಸಾಧ್ಯವಾಯಿತು.

ಪಂದ್ಯದ ಮೊದಲ ಗೋಲನ್ನು ಈಜಿಪ್ಟ್‌ನ ಇಮಾಮ್ ಅಶುರ್ 13ನೇ ನಿಮಿಷದಲ್ಲಿ ಬಾರಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಬಳಿಕ ಆಸ್ಟ್ರೇಲಿಯದ ಗೋಲನ್ನು ಕೂಡ ಈಜಿಪ್ಟ್ ತಂಡವೇ ಬಾರಿಸಿತು! 55ನೇ ನಿಮಿಷದಲ್ಲಿ ಈಜಿಪ್ಟ್‌ನ ಮುಹಮ್ಮದ್ ಹನಿ ಬಾರಿಸಿದ ಸ್ವಗೋಲು ಅಂಕಪಟ್ಟಿಯನ್ನು 1-1ರ ಸಮಬಲದಲ್ಲಿರಿಸಿತು.

ನಿಗದಿತ ಅವಧಿಯಲ್ಲಿ ಮತ್ತೆ ಯಾವುದೇ ಗೋಲು ಹುಟ್ಟಲಿಲ್ಲ. ಹೆಚ್ಚುವರಿ ಅವಧಿಯಲ್ಲೂ ಗೋಲುಗಳು ದಾಖಲಾಗಲಿಲ್ಲ. ಆಗ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಅನಿವಾರ್ಯವಾಯಿತು.

ಆಸ್ಟ್ರೇಲಿಯ ಕೋಚ್ ಟೋನಿ ಪೊಪೊವಿಚ್, ಪೆನಾಲ್ಟಿ ಶೂಟೌಟ್‌ಗಾಗಿ ಗೋಲ್‌ಕೀಪರನ್ನು ಬದಲಾಯಿಸಿದರು. ಪ್ಯಾಟ್ರಿಕ್ ಬೀಚ್‌ರ ಸ್ಥಾನಕ್ಕೆ ಅನುಭವಿ ಮ್ಯಾಥ್ಯೂ ರಯಾನ್‌ರನ್ನು ತರಲಾಯಿತು. ಆದರೆ, ಈ ಕ್ರಮ ವಿಫಲವಾಯಿತು.

ಬೋಲ್ಡ್/ಗುರಿ ತಪ್ಪಿದ ಆಸ್ಟ್ರೇಲಿಯ

ಹ್ಯಾರಿ ಸೌಟರ್ ಬಾರಿಸಿದ ಆಸ್ಟ್ರೇಲಿಯದ ಮೊದಲ ಪೆನಾಲ್ಟಿ ಗುರಿ ತಪ್ಪಿತು. ಅದರ ಕೊನೆಯ ಪೆನಾಲ್ಟಿಯನ್ನು ಬಾರಿಸಿದ 18 ವರ್ಷದ ಲೂಕಸ್ ಹೆರಿಂಗ್ಟನ್ ಕೂಡ ಗುರಿ ತಪ್ಪಿದರು. ಚೆಂಡು ಗೋಲುಪೆಟ್ಟಿಗೆಯ ಮೇಲಿನಿಂದಾಗಿ ಹೊರಗೆ ಹೋಯಿತು.

ಈಜಿಪ್ಟ್‌ನ ಎಲ್ಲಾ ನಾಲ್ವರು ಪೆನಾಲ್ಟಿ ಶೂಟರ್‌ಗಳು ಚೆಂಡನ್ನು ನಿಖರವಾಗಿ ಗೋಲುಪೆಟ್ಟಿಗೆಯೊಳಗೆ ಕಳುಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News