ರೊನಾಲ್ಡೊ ಅವರ ವಿಶ್ವಕಪ್ ಕನಸನ್ನು ಜೀವಂತವಾಗಿರಿಸಿದ ಕ್ರಿಕೆಟ್ ತಂತ್ರಜ್ಞಾನ!
ಕ್ರಿಸ್ಟಿಯಾನೊ ರೊನಾಲ್ಡೊ (Photo: X/@FIFAWorldCup)
ಸ್ನಿಕೊ ತಂತ್ರಜ್ಞಾನದ ಲಾಭ ಪಡೆದ ಪೋರ್ಚುಗಲ್, 2-1 ಅಂತರದಿಂದ ಕ್ರೊವೇಷಿಯವನ್ನು ಸೋಲಿಸಿದ ನಂತರ ರೊನಾಲ್ಡೊ ವಿಶ್ವಕಪ್ ನಲ್ಲಿ ಮತ್ತೊಂದು ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ.
32ನೇ ಸುತ್ತಿನಲ್ಲಿ ಕ್ರೊವೇಷಿಯ ತಂಡವನ್ನು 2-1 ಅಂತರದಿಂದ ಸೋಲಿಸಿದ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ನಲ್ಲಿ ಪೋರ್ಚುಗಲ್ ಪರವಾಗಿ ಇನ್ನೊಂದು ಪಂದ್ಯ ಆಡುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಪಂದ್ಯದ ಕೊನೆಯ ಕ್ಷಣದಲ್ಲಿ ತಂತ್ರಜ್ಞಾನವು ನಿರ್ಣಾಯಕ ಪಾತ್ರವಹಿಸಿದೆ.
ರೊನಾಲ್ಡೊ ಅವರ ಪೆನಾಲ್ಟಿ ಮತ್ತು ಗೊನ್ಕಾಲೊ ರಾಮೋಸ್ ಅವರ ಸ್ಟಾಪೇಜ್ ಟೈಮ್ ಹೆಡರ್ ಮೂಲಕ ಪೋರ್ಚುಗಲ್ ಗೆಲುವು ಸಾಧಿಸಿದೆ. ಆದರೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿರುವುದು VAR ನಿರ್ಣಯ. ಜೋಸ್ಕೊ ಗ್ವಾರ್ಡಿಯೋಲ್ ಸ್ಟಾಪೇಜ್ ಟೈಮ್ನ 13ನೇ ನಿಮಿಷದಲ್ಲಿ ಗೋಲು ಗಳಿಸಿದಾಗ ಪಂದ್ಯ ಹೆಚ್ಚುವರಿ ಸಮಯಕ್ಕೆ ತಿರುಗುತ್ತದೆ ಎಂದು ಕ್ರೊವೇಷಿಯ ನಂಬಿತ್ತು. ಆದರೆ VAR ವಿಮರ್ಶೆಯ ನಂತರ ಆ ಗೋಲನ್ನು ರದ್ದುಗೊಳಿಸಲಾಯಿತು.
ಆಫ್ಸೈಡ್ ಸ್ಥಾನದಲ್ಲಿ ನಿಂತಿದ್ದ ಕ್ರೊವೇಷಿಯದ ಇನ್ನೊಬ್ಬ ಆಟಗಾರನನ್ನು ತಲುಪುವ ಮೊದಲು ಚೆಂಡು ಇಗೋರ್ ಮಟನೋವಿಕ್ಗೆ ಸಂಪರ್ಕವಾಗಿದೆಯೇ ಎಂದು VAR ಪರಿಶೀಲಿಸಿದ ನಂತರ ಗೋಲನ್ನು ನಿರಾಕರಿಸಲಾಯಿತು. ಈ ನಿರ್ಧಾರವನ್ನು ಪಂದ್ಯದ ಚೆಂಡಿನಲ್ಲಿ ಅಳವಡಿಸಲಾಗಿದ್ದ ತಂತ್ರಜ್ಞಾನದ ನೆರವಿನಿಂದ ತೆಗೆದುಕೊಳ್ಳಲಾಗಿದೆ.
ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ, ಚೆಂಡು ಆತನ ಸಹ ಆಟಗಾರನನ್ನು ತಲುಪುವ ಮೊದಲು ಮಟನೋವಿಕ್ ಅವರನ್ನು ಸ್ಪರ್ಶಿಸಿತ್ತು. "ನಮ್ಮನ್ನು ಕೊಳ್ಳೆ ಹೊಡೆಯಲಾಗಿದೆ. ಮಟನೋವಿಕ್ ಸ್ವಲ್ಪ ಮಟ್ಟಿಗೆ ಚೆಂಡನ್ನು ಸ್ಪರ್ಶಿಸಿರುವುದು ತಂತ್ರಜ್ಞಾನದಲ್ಲಿ ಕಂಡುಬಂದಿದೆ. ದುಃಖದ ವಿಷಯವೆಂದರೆ ಇದು ಸರಿಯಾದ ನಿರ್ಧಾರ. ಮೈದಾನದಲ್ಲಿ ನಾವು ಉತ್ತಮ ತಂಡವಾಗಿದ್ದರೂ ಗೆಲುವು ನಮ್ಮದಾಗಿಲ್ಲ... ಮತ್ತೊಮ್ಮೆ" ಎಂದು ಕ್ರೊವೇಷಿಯ ಫುಟ್ಬಾಲ್ ತಂಡ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದೆ.
ವಿಶ್ವಕಪ್ ನಲ್ಲಿ ಬಳಸಲಾಗುವ ಪ್ರತಿಯೊಂದು ಅಡಿಡಾಸ್ ಟ್ರಯೋಂಡಾ ಚೆಂಡು, ಚಲನೆಯ ಸೆನ್ಸರ್ ಬಳಸಿಕೊಂಡು ಪ್ರತಿ ಸ್ಪರ್ಶವನ್ನು ದಾಖಲಿಸುವ ಮೈಕ್ರೋಚಿಪ್ ಅನ್ನು ಹೊಂದಿರುತ್ತದೆ. ಹೀಗಾಗಿ ಚೆಂಡು ಕ್ರೊವೇಷಿಯದ ಸಹ ಆಟಗಾರನನ್ನು ತಲುಪುವ ಮೊದಲು ಮಟನೋವಿಕ್ ಅವರನ್ನು ಸ್ಪರ್ಶಿಸಿರುವುದು ಕಂಡುಬಂದಿದೆ. ಹಾಗಾದಾಗ ಚೆಂಡನ್ನು ಸ್ವೀಕರಿಸುವ ಆಟಗಾರ ಆಫ್ಸೈಡ್ನಲ್ಲಿದ್ದಂತೆ ಪರಿಗಣಿಸಲಾಗುತ್ತದೆ.
ಕ್ರೀಡಾಂಗಣದಲ್ಲಿ ವೀಕ್ಷಿಸುತ್ತಿದ್ದ ಅನೇಕರಿಗೆ ಮಟನೋವಿಕ್ ಚೆಂಡನ್ನು ಮುಟ್ಟಿಲ್ಲ ಎಂದು ತೋರುತ್ತಿತ್ತು. ಈ ನಿರ್ಧಾರವು ಕ್ರೊವೇಷಿಯ ಆಟಗಾರರನ್ನು ನಿರಾಶೆಗೊಳಿಸಿದೆ. ಆದರೆ ಅನೇಕ ಅಭಿಮಾನಿಗಳು ತಂತ್ರಜ್ಞಾನವು ಆಟದ ಮೇಲೆ ಎಷ್ಟು ಪ್ರಭಾವ ಬೀರಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ಟೆಲಿವಿಷನ್ ವೀಕ್ಷಕರಿಗೆ ಪರಿಶೀಲಿಸಲಾಗುತ್ತಿರುವ ದೃಶ್ಯಗಳನ್ನು ತೋರಿಸಲಾಗಿತ್ತು. ಮರುಪ್ರಸಾರವು ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಸೆನ್ಸರ್ ಡೇಟಾದಲ್ಲಿ ಚೆಂಡಿನ ಸಂಪರ್ಕವನ್ನು ಸೂಚಿಸುವ ಸಣ್ಣ ಸ್ಪೈಕ್ ಕಂಡುಬಂದಿದೆ. ನಾರ್ವೆಜಿಯನ್ ರೆಫ್ರಿ ಎಸ್ಪನ್ ಎಸ್ಕಾಸ್ ಗೋಲನ್ನು ರದ್ದುಗೊಳಿಸುವ ಮೊದಲು ಹಲವು ಬಾರಿ ಮರುಪ್ರಸಾರವನ್ನು ವೀಕ್ಷಿಸಿದ್ದರು.
ಈ ನಿರ್ಧಾರವು ಕ್ರೀಡಾಂಗಣದೊಳಗೆ ಆಕ್ರೋಶದ ವಾತಾವರಣಕ್ಕೆ ಕಾರಣವಾಯಿತು. ಕ್ರೊವೇಷಿಯದ ಬೆಂಬಲಿಗರು ತಮ್ಮ ವಿಶ್ವಕಪ್ ಅಭಿಯಾನ ಅಂತ್ಯಗೊಳ್ಳುತ್ತಿದ್ದಂತೆ ಮೈದಾನಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದರು.
ಚೆಂಡಿನ ಸಂಪರ್ಕ ಪತ್ತೆಹಚ್ಚಲು ಬಳಸುವ ತಂತ್ರಜ್ಞಾನವಾದ ಸ್ನಿಕೊವನ್ನು ಮೊದಲಿಗೆ 2022ರ ವಿಶ್ವಕಪ್ ವೇಳೆ ಫುಟ್ಬಾಲ್ನಲ್ಲಿ ಬಳಸಲಾಗಿತ್ತು. ಆದರೆ ಪಂದ್ಯದಲ್ಲಿ ಮಹತ್ವದ ಕ್ಷಣವನ್ನು ನಿರ್ಧರಿಸಲು ಇದನ್ನು ವಿರಳವಾಗಿ ಬಳಸಲಾಗಿದೆ. ಚೆಂಡಿನೊಳಗೆ ಇರುವ ಮೈಕ್ರೋಚಿಪ್, ಚೆಂಡಿನ ಚಲನೆ, ವೇಗ, ಪಥ ಮತ್ತು ಆಟಗಾರರು ಮಾಡುವ ಪ್ರತಿಯೊಂದು ಸ್ಪರ್ಶದ ಬಗ್ಗೆ ತ್ವರಿತ ಡೇಟಾವನ್ನು ಒದಗಿಸುತ್ತದೆ.
ಕ್ರಿಕೆಟ್ ಅಭಿಮಾನಿಗಳಿಗೆ ಈ ತಂತ್ರಜ್ಞಾನ ಹೆಚ್ಚು ಪರಿಚಿತವಾಗಿದೆ. ಕ್ರಿಕೆಟ್ ಪಂದ್ಯಗಳಲ್ಲಿ ಬ್ಯಾಟರ್ ಚೆಂಡನ್ನು ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ಗಳಿಗೆ ಎಡ್ಜ್ ಮಾಡಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಸ್ನಿಕೊವನ್ನು ನಿಯಮಿತವಾಗಿ ಬಳಸಲಾಗುತ್ತದೆ. ದೃಶ್ಯವನ್ನು ನಿಧಾನಗೊಳಿಸಿ, ಆಡಿಯೋ ಮತ್ತು ಸೆನ್ಸರ್ ಡೇಟಾವನ್ನು ಹೊಂದಿಸುವ ಮೂಲಕ ಅಧಿಕಾರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬಹುದು.
ಸ್ನಿಕೊವನ್ನು 1990ರ ದಶಕದ ಮಧ್ಯಭಾಗದಲ್ಲಿ ಇಂಗ್ಲಿಷ್ ಕಂಪ್ಯೂಟರ್ ವಿಜ್ಞಾನಿ ಅಲನ್ ಪ್ಲಾಸ್ಕೆಟ್ ಕಂಡುಹಿಡಿದರು ಮತ್ತು 1999ರಲ್ಲಿ ಚಾನೆಲ್ 4ರ ಕ್ರಿಕೆಟ್ ಪ್ರಸಾರದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು.