FIFA WORLD CUP 2026 | ನಾಕೌಟ್ ಹಂತಕ್ಕೇರಿದ ಅತ್ಯಂತ ಪುಟ್ಟ ರಾಷ್ಟ್ರ ಕೇಪ್ ವರ್ಡ್
Photo Credit : AP , PTI
ಹ್ಯೂಸ್ಟನ್, ಜೂ.27: ಎಲ್ಲ ಮೂರು ಗ್ರೂಪ್ ಹಂತದ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಹೊರತಾಗಿಯೂ ಕೇಪ್ ವರ್ಡ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ-32ರ ಸುತ್ತಿಗೆ ಅರ್ಹತೆ ಪಡೆಯುವ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದೆ.
ಸೌದಿ ಅರೇಬಿಯ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿರುವುದು ಹಾಗೂ ಸ್ಪೇನ್ ತಂಡವು ಉರುಗ್ವೆ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಆಫ್ರಿಕಾದ ತಂಡವಾದ ಕೇಪ್ ವರ್ಡ್ ‘ಎಚ್’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸ್ಪೇನ್‌ನೊಂದಿಗೆ ಮುಂದಿನ ಸುತ್ತಿಗೇರಿದೆ.
ಕೇವಲ 5 ಲಕ್ಷ ಜನಸಂಖ್ಯೆ ಹೊಂದಿರುವ ದ್ವೀಪರಾಷ್ಟ್ರ ಕೇಪ್ ವರ್ಡ್ ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದೆ. ಮಾಜಿ ವಿಶ್ವ ಚಾಂಪಿಯನ್‌ಗಳಾದ ಸ್ಪೇನ್ ಹಾಗೂ ಉರುಗ್ವೆ ತಂಡಗಳಿದ್ದ ‘ಎಚ್’ ಗುಂಪಿನಿಂದ ಮುಂದಿನ ಸುತ್ತಿಗೇರಿರುವುದು ಅತ್ಯಂತ ದೊಡ್ಡ ಸಾಧನೆಯಾಗಿದೆ. ಪುರುಷರ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೇರಿದ ಅತ್ಯಂತ ಪುಟ್ಟ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಗಿದೆ.
ಮೂರು ಡ್ರಾ, ಒಂದು ಐತಿಹಾಸಿಕ ಅರ್ಹತೆ: ಕೇಪ್ ವರ್ಡ್ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ವಿಶ್ವಾಸದೊಂದಿಗೆ ‘ಎಚ್’ ಗುಂಪಿನ ಕೊನೆಯ ಪಂದ್ಯ ಆಡಲು ಆಗಮಿಸಿತ್ತು. ಆದರೆ ಅದರ ಹಣೆಬರಹವು ಗ್ವಾಡಲಜಾರದಲ್ಲಿ ನಡೆದ ಪಂದ್ಯವನ್ನು ಅವಲಂಬಿಸಿತ್ತು.
ಕೇಪ್ ವರ್ಡ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಇಡೀ ವಿಶ್ವದ ಗಮನ ಸೆಳೆದಿತ್ತು. ಆ ನಂತರ ಉರುಗ್ವೆ ವಿರುದ್ಧವೂ 2-2ರಿಂದ ಡ್ರಾ ಸಾಧಿಸಿತ್ತು. ಸೌದಿ ಅರೇಬಿಯ ವಿರುದ್ಧ ಮತ್ತೊಂದು ಅಂಕ ಗಳಿಸಿದ ಕೇಪ್ ವರ್ಡ್ ಒಟ್ಟು ಮೂರು ಅಂಕಗಳನ್ನು ಕಲೆ ಹಾಕಿತು. ಆದರೆ ಕೇಪ್ ವರ್ಡ್ ಮುಂದಿನ ಸುತ್ತಿಗೇರಲು ಸ್ಪೇನ್ ತಂಡವು ಉರುಗ್ವೆಯನ್ನು ಮಣಿಸಬೇಕಾಗಿತ್ತು.
ಮತ್ತೊಂದು ಶಿಸ್ತುಬದ್ಧ ಪ್ರದರ್ಶನ ನೀಡಿದ ಕೇಪ್ ವರ್ಡ್ ತಂಡವು ಸೌದಿ ಅರೇಬಿಯ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತು. ಮತ್ತೊಂದು ಪಂದ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿತು. ಸ್ಪೇನ್ ತಂಡವು ಉರುಗ್ವೆಯನ್ನು 1-0 ಅಂತರದಿಂದ ಸೋಲಿಸಿದ ಸುದ್ದಿ ತಲುಪಿದ ತಕ್ಷಣ ಕೇಪ್ ವರ್ಡ್ ಆಟಗಾರರು, ಕೋಚಿಂಗ್ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಯ ಸಂಭ್ರಮ ಎಲ್ಲೆಮೀರಿತು. ಮುಂದಿನ ಸುತ್ತಿಗೇರಿದ್ದು ಖಚಿತವಾದ ನಂತರ ಕೇಪ್ ವರ್ಡ್ ಆಟಗಾರರು ಆನಂದಬಾಷ್ಪ ಸುರಿಸಿದರು.
ಕೇಪ್ ವರ್ಡ್ ತಂಡವು ಜುಲೈ 3ರಂದು ಮಯಾಮಿಯಲ್ಲಿ ನಡೆಯಲಿರುವ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾದ ಸವಾಲನ್ನು ಎದುರಿಸಲಿದೆ.
ಕೇವಲ ಮೂರು ದೇಶಗಳಿಂದ ಈ ಸಾಧನೆ: ಗ್ರೂಪ್ ಹಂತದ ತನ್ನ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಮುಂದಿನ ಸುತ್ತಿಗೇರಿದ ಕೇಪ್ ವರ್ಡ್ ತಂಡವು ವಿಶ್ವಕಪ್ ಇತಿಹಾಸದ ಅತ್ಯಂತ ವಿಶೇಷ ಅಂಕಿ-ಅಂಶದ ಪಟ್ಟಿಗೆ ಸೇರ್ಪಡೆಯಾಗಿದೆ.
ಕೇಪ್ ವರ್ಡ್, ಎಲ್ಲ ಮೂರು ಗ್ರೂಪ್ ಪಂದ್ಯಗಳನ್ನು ಡ್ರಾ ಮಾಡಿಕೊಂಡ ನಂತರ ನಾಕೌಟ್ ಹಂತಕ್ಕೆ ಅರ್ಹತೆ ಪಡೆದ ಕೇವಲ ಮೂರನೇ ತಂಡವಾಗಿದೆ. ಕೇಪ್ ವರ್ಡ್‌ಗಿಂತ ಮೊದಲು ವೇಲ್ಸ್ (1958) ಹಾಗೂ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್ (1990) ಈ ಸಾಧನೆ ಮಾಡಿದ್ದವು.
ಕ್ಯಾಮರೂನ್ ತಂಡವು 1982ರಲ್ಲಿ ತನ್ನ ಚೊಚ್ಚಲ ವಿಶ್ವಕಪ್‌ನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೂ ಮುಂದಿನ ಸುತ್ತಿಗೇರುವಲ್ಲಿ ವಿಫಲವಾಗಿತ್ತು. ನ್ಯೂಜಿಲ್ಯಾಂಡ್ ತಂಡವು 2010ರ ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೂ ನಾಕೌಟ್ ಹಂತ ತಲುಪಿರಲಿಲ್ಲ.
ಕೇಪ್ ವರ್ಡ್ ಸಾಧನೆಯು ಮತ್ತೊಂದು ವಿಶಿಷ್ಟ ದಾಖಲೆಯಾಗಿದೆ. ಸ್ಲೋವಾಕಿಯಾದ ನಂತರ ತನ್ನ ಚೊಚ್ಚಲ ವಿಶ್ವಕಪ್‌ನಲ್ಲೇ ಗ್ರೂಪ್ ಹಂತವನ್ನು ದಾಟಿದ ಮೊದಲ ದೇಶವಾಗಿದೆ. ಸ್ಲೋವಾಕಿಯಾ 2010ರಲ್ಲಿ ಈ ಸಾಧನೆ ಮಾಡಿತ್ತು. ಅಲ್ಲದೆ, 2002ರ ನಂತರ ಗ್ರೂಪ್ ಹಂತದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಹೊಸ ತಂಡ ಎನಿಸಿಕೊಂಡಿದೆ. 2002ರಲ್ಲಿ ಸೆನೆಗಲ್ ಈ ಸಾಧನೆ ಮಾಡಿತ್ತು.
ಮತ್ತೊಂದು ವೀರೋಚಿತ ಪ್ರದರ್ಶನ ನೀಡಿದ ವೊಝಿನ್ಹಾ: ಕೇಪ್ ವರ್ಡ್ ತಂಡದ ಯಶಸ್ಸಿಗೆ ಹಿರಿಯ ಗೋಲ್‌ಕೀಪರ್ ವೊಝಿನ್ಹಾ ಅವರ ಅಮೋಘ ಪ್ರದರ್ಶನವೇ ಪ್ರಮುಖ ಕಾರಣ. 40 ವರ್ಷದ ವೊಝಿನ್ಹಾ ಸೌದಿ ಅರೇಬಿಯ ವಿರುದ್ಧ ಮತ್ತೊಂದು ಮಹತ್ವದ ಪ್ರದರ್ಶನ ನೀಡಿದರು. ಮೊದಲಾರ್ಧದ ಅಂತ್ಯದಲ್ಲಿ ಮುಹಮ್ಮದ್ ಕನ್ನೋ ಅವರ ಗೋಲು ಪ್ರಯತ್ನವನ್ನು ತಡೆದ ವೊಝಿನ್ಹಾ, 66ನೇ ನಿಮಿಷದಲ್ಲಿ ಮತ್ತೊಂದು ಅವಕಾಶವನ್ನು ವಿಫಲಗೊಳಿಸಿದರು. 92ನೇ ನಿಮಿಷದಲ್ಲಿ ಅಬ್ದುಲ್ಲಾ ಅಲ್ ಹಮ್ದಾನ್ ಅವರ ನಿರ್ಣಾಯಕ ಗೋಲು ಪ್ರಯತ್ನವನ್ನೂ ತಡೆದರು.
ಪಂದ್ಯಾವಳಿಯುದ್ದಕ್ಕೂ ಹಿರಿಯ ಗೋಲ್‌ಕೀಪರ್ ಅವರ ಪ್ರದರ್ಶನ ಜಾಗತಿಕ ಗಮನ ಸೆಳೆದಿದೆ. ಕೇಪ್ ವರ್ಡ್‌ನ ಐತಿಹಾಸಿಕ ಅಭಿಯಾನದ ವೇಳೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 16 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ಗಳನ್ನು ಪಡೆದಿದ್ದಾರೆ.
ಟೂರ್ನಿ ಆರಂಭಕ್ಕೂ ಮೊದಲು ಸ್ಪೇನ್, ಉರುಗ್ವೆ ಹಾಗೂ ಸೌದಿ ಅರೇಬಿಯ ತಂಡಗಳಿದ್ದ ಗುಂಪಿನಲ್ಲಿ ಕೇಪ್ ವರ್ಡ್ ಮುಂದಿನ ಸುತ್ತಿಗೇರಲಿದೆ ಎಂದು ಯಾರೂ ಊಹಿಸಿರಲಿಲ್ಲ. ‘ಬ್ಲೂ ಶಾರ್ಕ್ಸ್’ ಖ್ಯಾತಿಯ ಕೇಪ್ ವರ್ಡ್ ತಂಡವು ಮಾಜಿ ವಿಶ್ವ ಚಾಂಪಿಯನ್ ಸ್ಪೇನ್‌ಗೆ ಆರಂಭದಲ್ಲೇ ಆಘಾತ ನೀಡಿ ಸ್ಪರ್ಧಾವಳಿಯಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದೆ.
ಸ್ಪೇನ್ ತಂಡವು ‘ಎಚ್’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ, ಕೇಪ್ ವರ್ಡ್ ತಂಡವು ಮೂರು ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಉರುಗ್ವೆ ಹಾಗೂ ಸೌದಿ ಅರೇಬಿಯ ತಂಡಗಳನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದೆ.