FIFA World Cup | ಕ್ರೊಯೇಶಿಯ ವಿರುದ್ಧ ಇಂಗ್ಲೆಂಡ್ ದಿಟ್ಟ ಆರಂಭ : ನಾಯಕ ಹ್ಯಾರಿ ಕೇನ್ ಅವಳಿ ಗೋಲು
ಹ್ಯಾರಿ ಕೇನ್ |Photo Credit : aljazeera.com
ಡಲ್ಲಾಸ್ (ಅಮೆರಿಕ), ಜೂ. 18: ಫಿಫಾ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಬುಧವಾರ, ನಾಯಕ ಹ್ಯಾರಿ ಕೇನ್‌ರ ಅವಳಿ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡವು ಕ್ರೊಯೇಶಿಯ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿದೆ.
ಇಂಗ್ಲೆಂಡ್‌ನ ಇನ್ನುಳಿದ ಎರಡು ಗೋಲುಗಳನ್ನು ಜೂಡ್ ಬೆಲಿಂಗ್‌ಹ್ಯಾಮ್ ಮತ್ತು ಬದಲಿ ಆಟಗಾರ ಮಾರ್ಕಸ್ ರ್ಯಾಶ್‌ಫೋರ್ಡ್ ಬಾರಿಸಿದರು.
‘ಎಲ್’ ಗುಂಪಿನ ಪಂದ್ಯದ ಹನ್ನೆರಡನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಕೇನ್ ಮೊದಲ ಗೋಲು ಬಾರಿಸಿದರು. ಆದರೆ, 36ನೇ ನಿಮಿಷದಲ್ಲಿ ಕ್ರೊಯೇಶಿಯದ ಮಾರ್ಟಿನ್ ಬಟುರಿನ ಇಂಗ್ಲೆಂಡ್ ಮಿಡ್‌ಫೀಲ್ಡ್‌ನ ತಪ್ಪುಗಳನ್ನು ಬಳಸಿಕೊಂಡು ಗೋಲು ಬಾರಿಸುವ ಮೂಲಕ ಅಂಕಪಟ್ಟಿಯನ್ನು ಸಮಬಲಗೊಳಿಸಿದರು.
ಬಳಿಕ 42ನೇ ನಿಮಿಷದಲ್ಲಿ ಕೇನ್ ತನ್ನ ಎರಡನೇ ಗೋಲು ದಾಖಲಿಸಿ ಇಂಗ್ಲೆಂಡ್‌ಗೆ 2-1ರ ಮುನ್ನಡೆ ಒದಗಿಸಿದರು. ಆ ಮೂಲಕ ತನ್ನ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು ಅವರು ಹತ್ತಕ್ಕೇರಿಸಿದರು. ಇದರೊಂದಿಗೆ ಅವರು ಇಂಗ್ಲೆಂಡ್ ಆಟಗಾರನೊಬ್ಬನ ಗರಿಷ್ಠ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನೂ ಸರಿಗಟ್ಟಿದರು. ಇದಕ್ಕೂ ಮೊದಲು, ಇಂಗ್ಲೆಂಡ್‌ನ ಗ್ಯಾರಿ ಲೈನ್‌ಕರ್ 10 ವಿಶ್ವಕಪ್ ಗೋಲುಗಳನ್ನು ಬಾರಿಸಿದ್ದಾರೆ.
ಆದರೆ. 45+5ನೇ ನಿಮಿಷದಲ್ಲಿ ಗೋಲು ಬಾರಿಸಿದ ಕ್ರೊಯೇಶಿಯದ ಪೀಟರ್ ಮೂಸ ಮತ್ತೊಮ್ಮೆ ಅಂಕಪಟ್ಟಿಯನ್ನು ಸಮಗೊಳಿಸಿದರು.
47ನೇ ನಿಮಿಷದಲ್ಲಿ ಬೆಲಿಂಗ್‌ಹ್ಯಾಮ್ ಬಾರಿಸಿದ ಗೋಲು ಇಂಗ್ಲೆಂಡ್‌ನ ಮುನ್ನಡೆಯನ್ನು 3-2ಕ್ಕೆ ಒಯ್ದಿತು. ಅಂತಿಮವಾಗಿ, 85ನೇ ನಿಮಿಷದಲ್ಲಿ ರ್ಯಾಶ್‌ಫೋಡ್ ಬಾರಿಸಿದ ಗೋಲು ಇಂಗ್ಲೆಂಡ್‌ನ ವಿಜಯದ ಅಂತರವನ್ನು 4-2ಕ್ಕೆ ವೃದ್ಧಿಸಿತು.
ನೀರು ಕುಡಿಯುವ ವಿರಾಮಕ್ಕೆ ಪ್ರೇಕ್ಷಕರ ಆಕ್ಷೇಪ!
ಇಂಗ್ಲೆಂಡ್ ಮತ್ತು ಕ್ರೊಯೇಶಿಯ ನಡುವಿನ ಪಂದ್ಯದ ಮೊದಲ ನೀರು ಕುಡಿಯುವ ವಿರಾಮದ ವೇಳೆ ಡಲ್ಲಾಸ್ ಸ್ಟೇಡಿಯಮ್‌ನ ಪ್ರೇಕ್ಷಕರು ಹೀಯಾಳಿಕೆ ಧ್ವನಿಯ ಮೂಲಕ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹೊಸ ನಿಯಮಕ್ಕೆ ಪ್ರೇಕ್ಷಕರು ಅಸಹನೆ ವ್ಯಕ್ತಪಡಿಸಿದ್ದಾರೆ. ಪಂದ್ಯವೊಂದರ ಪ್ರತಿ ಅರ್ಧದಲ್ಲಿ ಮೂರು ನಿಮಿಷಗಳ ನೀರು ಕುಡಿಯುವ ವಿರಾಮವನ್ನು ಫಿಫಾ ಈ ಪಂದ್ಯಾವಳಿಯಲ್ಲಿ ಜಾರಿಗೆ ತಂದಿದೆ. ಉತ್ತರ ಅಮೆರಿಕದ ಬೇಸಿಗೆಯ ಶಾಖ ಮತ್ತು ತೇವಾಂಶದಿಂದ ಚೇತರಿಸಿಕೊಳ್ಳುವ ಅವಕಾಶವನ್ನು ಆಟಗಾರರಿಗೆ ನೀಡುವ ಉದ್ದೇಶದಿಂದ ಫಿಫಾ ಈ ನಿಯಮವನ್ನು ಜಾರಿಗೆ ತಂದಿದೆ.
ಈ ವಿರಾಮಗಳು ಆಟದ ಹರಿವಿಗೆ ತಡೆ ಹಾಕುತ್ತವೆ ಎಂದು ಕೆಲವು ಟೀಕಾಕಾರರು ಹೇಳಿದರೆ, ಇದು ಪಂದ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಹೆಚ್ಚು ಜಾಹೀರಾತುಗಳನ್ನು ಪ್ರದರ್ಶಿಸಲು ಪ್ರಸಾರಕರಿಗೆ ಅವಕಾಶ ನೀಡುವ ತಂತ್ರವಾಗಿದೆ ಎಂದು ಇನ್ನು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ‘ಎಲ್’ ಗುಂಪಿನ ಪಂದ್ಯದಲ್ಲಿ ಪನಾಮ ಮತ್ತು ಘಾನ ಆಟಗಾರರು ಸುರಿಯುವ ಮಳೆಯ ನಡುವೆಯೇ ನೀರು ಕುಡಿಯುವ ಕಡ್ಡಾಯ ವಿರಾಮಕ್ಕೆ ಹೋದಾಗ ಕೂಡ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಂಗಳವಾರ, ನಾರ್ವೆ ಮತ್ತು ಇರಾನ್ ನಡವಿನ ಪಂದ್ಯದಲ್ಲೂ ಕಡ್ಡಾಯ ನೀರು ಕುಡಿಯುವ ವಿರಾಮ ಆರಂಭಗೊಂಡಾಗ ಪ್ರೇಕ್ಷಕರು ಹೀಯಾಳಿಕೆಯ ಧ್ವನಿ ಮಾಡಿದ್ದರು.