ನಾಳೆ ಐದನೇ, ಕೊನೆಯ ಏಕದಿನ ಪಂದ್ಯ: ಕಿವೀಸ್ ವೇಗಿಗಳಿಗೆ ದಿಟ್ಟ ಉತ್ತರ ನೀಡಲು ಭಾರತದ ಬ್ಯಾಟರ್ಗಳು ಸಜ್ಜು
Photo Credit : PTI
ಮೌಂಟ್ ಮೌಂಗನುಯಿ: ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆಯಲಿರುವ ಐದನೇ ಹಾಗೂ ಕೊನೆಯ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ವೇಗದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ಜೊತೆಗೆ ಸರಣಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.
ಭಾರತ ತಂಡವು ಶುಕ್ರವಾರ ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬೃಹತ್ ಅಂತರದಿಂದ (244 ರನ್) ಸೋತಿದ್ದರೂ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿದೆ.
ಭಾರತೀಯ ಬ್ಯಾಟರ್ಗಳು ವೇಗಿಗಳ ಸ್ನೇಹಿ ಪಿಚ್ನಲ್ಲಿ ಪರದಾಟ ನಡೆಸಿದ್ದರು. ತನ್ನ ಮೊದಲ ಓವರ್ನಲ್ಲಿ ಮೂರು ವಿಕೆಟ್ಗಳನ್ನು ಉರುಳಿಸಿದ್ದ ಮ್ಯಾಟ್ ಹೆನ್ರಿ (6-27)ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು. ವೇಗಿಗಳ ಸ್ನೇಹಿ ಪಿಚ್ನಲ್ಲಿ ಭಾರತ ತಂಡವು ಸಮರ್ಥವಾಗಿ ಆಡುವ ಅಗತ್ಯವಿದೆ.
ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಭಾರತ ತಂಡದ ಪರ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸರಣಿಯಲ್ಲಿ ಇನ್ನಷ್ಟೇ ತಮ್ಮ ಸಾಮರ್ಥ್ಯ ತೋರಬೇಕಾಗಿದೆ. ಶ್ರೇಯಸ್ ನಾಯಕನಾಗಿ ತನ್ನ ಮೊದಲ ಪಂದ್ಯದಲ್ಲಿ ಭಾರೀ ವೈಫಲ್ಯ ಕಂಡಿದ್ದಾರೆ.
ಏಕದಿನ ಪಂದ್ಯಕ್ಕೆ ಮಾತ್ರ ಸೀಮಿತವಾಗಿರುವ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಬಹುಶಃ ಕೊನೆಯ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಲು ಇದೊಂದು ಕೊನೆಯ ಅವಕಾಶವಾಗಿದೆ. ಶುಕ್ರವಾರದ ಪಂದ್ಯದಲ್ಲಿ ಕೊಹ್ಲಿ ಕೂಡ ಹೆನ್ರಿ ಮ್ಯಾಜಿಕ್ಗೆ ನಿರುತ್ತರವಾಗಿದ್ದರು.
ಗೆಲ್ಲಲು 334 ರನ್ ಗುರಿ ಪಡೆದಿದ್ದ ಭಾರತ ತಂಡವು 26.4 ಓವರ್ಗಳಲ್ಲಿ 89 ರನ್ಗೆ ಗಂಟು ಮೂಟೆ ಕಟ್ಟಿತ್ತು. ಈ ಪ್ರದರ್ಶನವು ಮುಖ್ಯಕೋಚ್ ಗೌತಮ್ ಗಂಭೀರ್ ಆಕ್ರೋಶಕ್ಕೆ ಕಾರಣವಾಗಿದೆ.
‘‘ಎರಡನೇ ಇನಿಂಗ್ಸ್ನಲ್ಲಿ ವಾತಾವರಣವು ನಾಟಕೀಯವಾಗಿ ಬೌಲರ್ಗಳ ಫೇವರ್ ಆಗಿ ಪರಿವರ್ತನೆಯಾಯಿತು. ಎರಡೂ ತಂಡಗಳ ವೇಗಿಗಳ ಪವರ್ಪ್ಲೇ ಪ್ರದರ್ಶನವು ವ್ಯತಿರಿಕ್ತವಾಗಿತ್ತು’’ಎಂದು ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಪವರ್ಪ್ಲೇನ ಆರು ಓವರ್ಗಳಲ್ಲಿ ನ್ಯೂಝಿಲ್ಯಾಂಡ್ ತಂಡವು 9 ರನ್ ನೀಡಿ ಭಾರತದ ನಾಲ್ಕು ವಿಕೆಟ್ಗಳನ್ನು ಕೆಡವಿದರೆ, ಭಾರತದ ಪಾಳಯದಲ್ಲಿ ಗುರ್ನೂರ್ ಬ್ರಾರ್ ಹಾಗೂ ಆಕಿಬ್ ನಬಿ ಆರಂಭದಲ್ಲಿ ತಲಾ ಒಂದು ವಿಕೆಟ್ ಪಡೆದಿದ್ದರೂ ಸಾಕಷ್ಟು ರನ್ ನೀಡಿದ್ದರು.
ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ್ದ ಕುಲದೀಪ್ ಯಾದವ್ ಅವರು ವಿಲ್ ಯಂಗ್ ಅವರಿಂದ ದಂಡನೆಗೆ ಒಳಗಾಗಿದ್ದ್ದರು. ಟೆಸ್ಟ್ ತಂಡದಿಂದ ಬಿಡುಗಡೆಯಾಗಿರುವ ಕುಲದೀಪ್ ದೇಶೀಯ ಕ್ರಿಕೆಟ್ ಆಡಲು ಸ್ವದೇಶಕ್ಕೆ ತೆರಳಲಿದ್ದಾರೆ.
ಸರಣಿಯನ್ನು 2-2ರಿಂದ ಡ್ರಾಗೊಳಿಸುವ ಗುರಿ ಇಟ್ಟುಕೊಂಡಿರುವ ನ್ಯೂಝಿಲ್ಯಾಂಡ್ ತಂಡದ ಪಾಲಿಗೆ ಐದನೇ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ. ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ ನಾಲ್ಕನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತನ್ನ ಲಯ ಕಂಡುಕೊಂಡಿದ್ದಾರೆ. ಎರಡು ಬಾರಿ ಜೀವದಾನ ಪಡೆದಿದ್ದ ವಿಲ್ ಯಂಗ್ ಆಕರ್ಷಕ ಶತಕವನ್ನು ಗಳಿಸಿದ್ದರು.
ಮೊದಲ10 ಓವರ್ಗಳಲ್ಲಿ ಪಂದ್ಯ ಕೈಜಾರದಂತೆ ನೋಡಿಕೊಳ್ಳಲು ಭಾರತೀಯ ವೇಗಿಗಳು ಆರಂಭಿಕ ಆಟಗಾರರನ್ನು ಬೇಗನೆ ಔಟ್ ಮಾಡಬೇಕಾಗಿದೆ.
ಬೇ ಓವಲ್ನಲ್ಲಿ ಹೊಸ ಮುಖ ಬ್ರೆಟ್ ರಾಂಡೆಲ್ ಅವಕಾಶ ಪಡೆಯಲಿದ್ದಾರೆಯೇ ಎಂದು ನೋಡಬೇಕಾಗಿದೆ. ನ್ಯೂಝಿಲ್ಯಾಂಡ್ ತಂಡವು ಏಳು ವರ್ಷಗಳಿಂದ ಸ್ವದೇಶದಲ್ಲಿ ಏಕದಿನ ಸರಣಿಯನ್ನು ಸೋತಿಲ್ಲ. 2019ರಲ್ಲಿ ಭಾರತ ವಿರುದ್ಧ ಕೊನೆಯ ಬಾರಿ ಸರಣಿ ಸೋತಿತ್ತು.