Photo Credit : PTI
ಹ್ಯಾಮಿಲ್ಟನ್, ನ.1: ಆತಿಥೇಯ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ರವಿವಾರ ನಡೆದ ಐದನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಸೋತ ಹೊರತಾಗಿಯೂ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ-20 ಸರಣಿಯನ್ನು 3-2 ಅಂತರದಿಂದ ಕೈವಶ ಮಾಡಿಕೊಂಡಿದೆ.
ನಾಲ್ಕು ವಿಕೆಟ್ ಗೊಂಚಲು ಪಡೆದ ಆ್ಯಡಮ್ ಮಿಲ್ನೆ ಭಾರತ ತಂಡವನ್ನು 8 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಗೆ ನಿಯಂತ್ರಿಸಿದರು. ಟಿಮ್ ಸೀಫರ್ಟ್ ಹಾಗೂ ಗ್ಲೆನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ ಆತಿಥೇಯರಿಗೆ ಸುಲಭ ಗೆಲುವು ತಂದುಕೊಟ್ಟರು.
ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ಗೆ ಇಳಿಸಿದ ಭಾರತ ತಂಡವು ಆರಂಭಿಕ ಕುಸಿತದಿಂದ ಚೇತರಿಸಿಕೊಂಡು ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಬಿರುಸಿನ ಅರ್ಧಶತಕಗಳ ಬಲದಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಕಿಶನ್ (61 ರನ್, 32 ಎಸೆತ) ಹಾಗೂ ಶ್ರೇಯಸ್ ಅಯ್ಯರ್ (50 ರನ್, 23 ಎಸೆತ) ಮೂರನೇ ವಿಕೆಟ್ ಗೆ ನಿರ್ಣಾಯಕ 93 ರನ್ ಗಳ ಜೊತೆಯಾಟ ನಡೆಸಿದರು. ಮಿಲ್ನೆ ಅವರ ಶಿಸ್ತುಬದ್ಧ ಬೌಲಿಂಗ್ (4-19) ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಭಾರತೀಯ ಇನಿಂಗ್ಸ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಗೆಲ್ಲಲು 192 ರನ್ ಗಳ ಗುರಿ ಪಡೆದಿದ್ದ ಕಿವೀಸ್ ತಂಡವನ್ನು ಸೀಫರ್ಟ್ (93 ರನ್) ಹಾಗೂ ಫಿಲಿಪ್ಸ್ (ಔಟಾಗದೆ 65) ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.
ಭಾರತಕ್ಕೆ ಆಸರೆಯಾದ ಕಿಶನ್, ಶ್ರೇಯಸ್: ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡವು ಶ್ರೇಷ್ಠ ಆರಂಭ ಪಡೆಯುವಲ್ಲಿ ವಿಫಲವಾಯಿತು. ಜೇಕಬ್ ಡಫಿ ಮೊದಲ ಓವರ್ನಲ್ಲಿ ಬಿಗಿ ಬೌಲಿಂಗ್ ಮಾಡಿದ ನಂತರ ಆ್ಯಡಮ್ ಮಿಲ್ನೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (1 ರನ್) ಅವರನ್ನು ಬೇಗನೆ ಔಟ್ ಮಾಡಿದರು. ಸಂಜು ಸ್ಯಾಮ್ಸನ್ 10 ಎಸೆತಗಳಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದಾಗ ಭಾರತ 3.1 ಓವರ್ ಗಳಲ್ಲಿ 19 ರನ್ ಗಳಿಗೆ 2 ವಿಕೆಟ್ ಗಳನ್ನು ಕಳೆದುಕೊಂಡಿತು.
ಆಕ್ರಮಣಕಾರಿ ಜೊತೆಯಾಟದ ಮೂಲಕ ಕಿಶನ್ ಹಾಗೂ ಶ್ರೇಯಸ್ ಭಾರತ ತಂಡದ ಇನಿಂಗ್ಸ್ಗೆ ಆಸರೆಯಾದರು. ಈ ಜೋಡಿಯು ನ್ಯೂಝಿಲ್ಯಾಂಡ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದಲ್ಲದೆ, ನಿರಂತರವಾಗಿ ಬೌಂಡರಿಗಳನ್ನು ಗಳಿಸಿ ಆತಿಥೇಯರನ್ನು ಒತ್ತಡಕ್ಕೆ ಸಿಲುಕಿಸಿತು. ಕಿಶನ್ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಇಬ್ಬರ ನಡುವಿನ 93 ರನ್ ಗಳ ಜೊತೆಯಾಟದಿಂದ ಭಾರತವು ಕಳಪೆ ಆರಂಭದಿಂದ ಚೇತರಿಸಿಕೊಂಡು ಸುಲಭವಾಗಿ 100 ರನ್ ಗಳ ಗಡಿ ದಾಟಿತು.
ನ್ಯೂಝಿಲ್ಯಾಂಡ್ಗೆ 10ನೇ ಓವರ್ ದುಬಾರಿಯಾಗಿ ಪರಿಣಮಿಸಿತು. ಶ್ರೇಯಸ್ ಹಾಗೂ ಕಿಶನ್ ಸ್ಪಿನ್ನರ್ ಬ್ರೆಸ್ವೆಲ್ ಬೌಲಿಂಗ್ ನಲ್ಲಿ 27 ರನ್ ಗಳಿಸಿದರು. ಶ್ರೇಯಸ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರೆ, ಕಿಶನ್ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರು. ಬ್ಲೇರ್ ಟಿಕ್ನೆರ್ ಕೊನೆಗೂ ಕಿಶನ್ ವಿಕೆಟ್ ಉರುಳಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಕಿಶನ್ 5 ಬೌಂಡರಿ, 5 ಸಿಕ್ಸರ್ ಗಳ ಸಹಿತ 32 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದರು.
ಶ್ರೇಯಸ್ ಕೇವಲ 22 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆದರೆ, 23 ಎಸೆತಗಳಲ್ಲಿ 3 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ಸಮೇತ 50 ರನ್ ಗಳಿಸಿ ಔಟಾದರು.
ಕಿಶನ್-ಶ್ರೇಯಸ್ ಪೆವಿಲಿಯನ್ಗೆ ವಾಪಸಾದ ನಂತರ ಭಾರತವು ಇನಿಂಗ್ಸ್ನ ಅಂತ್ಯದಲ್ಲಿ ಪರದಾಟ ನಡೆಸಿತು. ತಿಲಕ್ ವರ್ಮಾ 6 ರನ್ ಗಳಿಸಿ ನಿರ್ಗಮಿಸಿದರೆ, ನಮನ್ ಧೀರ್ (33 ರನ್, 23 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ನಿತೀಶ್ ರೆಡ್ಡಿ (22 ರನ್, 17 ಎಸೆತ) ಅಂತಿಮ ಸ್ಪರ್ಶ ನೀಡಲು ಯತ್ನಿಸಿದರು. ಭಾರತದ ಸ್ಕೋರ್ ಅನ್ನು 200ರ ಸನಿಹ ತಲುಪಿಸಿದರು. ಇನಿಂಗ್ಸ್ನ ಕೊನೆಯಲ್ಲಿ ಕಿವೀಸ್ ಬೌಲರ್ ಗಳು ವಿಕೆಟ್ ಉರುಳಿಸುತ್ತಾ ಸಾಗಿದರು. ಧೀರ್ ಹಾಗೂ ನಿತೀಶ್ ಅವರ ವಿಕೆಟ್ ಗಳು ಪತನಗೊಂಡವು. ಭುವನೇಶ್ವರ್ (6 ರನ್) ವಿಕೆಟ್ ಪಡೆದ ಮಿಲ್ನೆ ತಮ್ಮ ನಾಲ್ಕನೇ ವಿಕೆಟ್ ಪೂರೈಸಿದರು.
ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿತು. ಮಿಲ್ನೆ (4-19) ಯಶಸ್ವಿ ಪ್ರದರ್ಶನ ನೀಡಿದರೆ, ಟಿಕ್ನೆರ್ ಹಾಗೂ ಸ್ಮಿತ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ನ್ಯೂಝಿಲ್ಯಾಂಡ್ ರನ್ ಚೇಸ್ಗೆ ಬಲ ತುಂಬಿದ ಸೀಫರ್ಟ್, ಫಿಲಿಪ್ಸ್: ಗೆಲ್ಲಲು 192 ರನ್ ಗಳ ಗುರಿ ಬೆನ್ನಟ್ಟಿದ ಕಿವೀಸ್ ಕೂಡ ಆರಂಭಿಕ ಆಟಗಾರ ಫಿನ್ ಅಲೆನ್ ಅವರನ್ನು ಕೇವಲ 2 ರನ್ ಗಳಿಗೆ ಕಳೆದುಕೊಂಡಿತು. ಎಡಗೈ ವೇಗದ ಬೌಲರ್ ಅರ್ಷದೀಪ್ ಹೆಚ್ಚುವರಿ ಬೌನ್ಸ್ ಮೂಲಕ ಅಲೆನ್ ವಿಕೆಟ್ ಉರುಳಿಸಿದರು.
ನಿರ್ಣಾಯಕ ಜೊತೆಯಾಟ ನಡೆಸಿದ ಸೀಫರ್ಟ್ ಹಾಗೂ ಡ್ಯಾರಿಲ್ ಮಿಚೆಲ್ (29 ರನ್) ಇನಿಂಗ್ಸ್ಗೆ ಆಸರೆಯಾದರು. 13 ರನ್ ಗಳಿಸಿದ್ದಾಗ ನಮನ್ ಧೀರ್ ಅವರಿಂದ ಜೀವದಾನ ಪಡೆದ ಸೀಫರ್ಟ್ ನಿಧಾನವಾಗಿ ತಮ್ಮ ಲಯ ಕಂಡುಕೊಂಡರು. ಆಕರ್ಷಕ ಅರ್ಧಶತಕ ಗಳಿಸಿದ ಸೀಫರ್ಟ್, ಎರಡನೇ ವಿಕೆಟ್ ಗೆ ಮಿಚೆಲ್ ಜೊತೆ 73 ರನ್ ಸೇರಿಸಿದರು.
ಮಿಚೆಲ್ ವಿಕೆಟ್ ಪಡೆದ ವರುಣ್ ಚಕ್ರವರ್ತಿ ಈ ಜೊತೆಯಾಟವನ್ನು ಮುರಿದರು. ಸೀಫರ್ಟ್ ಜೊತೆ ಕೈಜೋಡಿಸಿದ ಗ್ಲೆನ್ ಫಿಲಿಪ್ಸ್ ಚೇಸ್ ವೇಳೆ ಸಂಪೂರ್ಣ ಹಿಡಿತ ಸಾಧಿಸಿದರು. ಫಿಲಿಪ್ಸ್ 38 ಎಸೆತಗಳಲ್ಲಿ ಔಟಾಗದೆ 65 ರನ್ ಗಳಿಸಿದರು. ಸೀಫರ್ಟ್ 50 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಗಳ ಸಹಿತ 93 ರನ್ ಗಳಿಸಿ ಮಿಂಚಿದರು. ನ್ಯೂಝಿಲ್ಯಾಂಡ್ 18 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 195 ರನ್ ಗಳಿಸಿ ಏಳು ವಿಕೆಟ್ ಗಳಿಂದ ಜಯ ಸಾಧಿಸಿತು.
ನ್ಯೂಝಿಲ್ಯಾಂಡ್ ಸತತ ಎರಡು ಪಂದ್ಯಗಳನ್ನು ಜಯಿಸಿದ್ದರೂ, ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತವು ಐದು ಪಂದ್ಯಗಳ ಟಿ-20 ಸರಣಿಯನ್ನು 3-2 ಅಂತರದಿಂದ ರೋಚಕವಾಗಿ ಗೆದ್ದುಕೊಳ್ಳುವಲ್ಲಿ ಶಕ್ತವಾಯಿತು. ಇದರಿಂದ ಮುಂಬರುವ ಏಕದಿನ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.