Photo Credit : bcci

ಹೊಸದಿಲ್ಲಿ, ಅ.31: ನ್ಯೂಝಿಲ್ಯಾಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ವೇಗದ ಬೌಲರ್ ಆಕಿಬ್ ನಬಿ ಅವರನ್ನು ಭಾರತ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬಲಗೈ ವೇಗದ ಬೌಲರ್ ನಬಿ ಅವರನ್ನು ಈ ಹಿಂದೆ ಐದು ಪಂದ್ಯಗಳ ಸರಣಿಯ ನಾಲ್ಕನೇ ಹಾಗೂ ಐದನೇ ಪಂದ್ಯಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಇದೀಗ ನವೆಂಬರ್ 4ರಿಂದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಲಭ್ಯವಿರಲಿದ್ದಾರೆ.

ವೆಸ್ಟ್ಇಂಡೀಸ್ ತಂಡದ ವಿರುದ್ಧ ಇತ್ತೀಚೆಗೆ ಸ್ವದೇಶದಲ್ಲಿ ನಡೆದ ಸರಣಿಯ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಕಿವೀಸ್ ವಿರುದ್ಧದ ಇಡೀ ಏಕದಿನ ಸರಣಿಯಿಂದಲೇ ಹೊರಗುಳಿದ ಕಾರಣ ಈ ಬದಲಾವಣೆ ಮಾಡಲಾಗಿದೆ.

ಪ್ರಸಿದ್ಧ ಅವರು ನ್ಯೂಝಿಲ್ಯಾಂಡ್ ತಂಡದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ. ಪ್ರಸಿದ್ಧ ಅವರು ನವೆಂಬರ್ 7ರಂದು ಆರಂಭವಾಗಲಿರುವ ನ್ಯೂಝಿಲ್ಯಾಂಡ್ ಎ ತಂಡದ ವಿರುದ್ಧದ ಮೂರನೇ ಹಾಗೂ ಕೊನೆಯ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಪಂದ್ಯದಲ್ಲಿ ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲಿದ್ದಾರೆ.

ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಏಕದಿನ ತಂಡದಲ್ಲಿ ಮುಂದುವರಿಯಲಿದ್ದಾರೆ. ನವೆಂಬರ್ 19ರಂದು ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮ್ಯಾಚ್ ಪ್ರಾಕ್ಟೀಸ್ಗಾಗಿ ಭಾರತ ಎ ತಂಡದ ಪರ ಆಡಲಿದ್ದಾರೆ.

►ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ:

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮುಹಮ್ಮದ್ ಸಿರಾಜ್, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ (ಮೊದಲ ಏಕದಿನ ಪಂದ್ಯಕ್ಕೆ ಮಾತ್ರ), ಆಕಿಬ್ ನಬಿ.

►ನಾಲ್ಕನೇ ಹಾಗೂ ಐದನೇ ಏಕದಿನ ಪಂದ್ಯಗಳಿಗೆ ಭಾರತ ತಂಡ:

ಶ್ರೇಯಸ್ ಅಯ್ಯರ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್, ಉಪ ನಾಯಕ), ಅಕ್ಷರ್ ಪಟೇಲ್, ನಮನ್ ಧೀರ್, ಆಕಿಬ್ ನಬಿ, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಕುಮಾರ ಕುಶಾಗ್ರ (ವಿಕೆಟ್ ಕೀಪರ್), ಮುಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲದೀಪ್ ಯಾದವ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor