ಮೊದಲ ಏಕದಿನ | ಭಾರತದ ಗೆಲುವಿಗೆ 259 ರನ್ ಗುರಿ
ಜೋ ರೂಟ್, ಲಿಯಾಮ್ ಡಾಸನ್ ಅರ್ಧಶತಕ
ಜೋ ರೂಟ್ |Photo Credit : PTI
ಬರ್ಮಿಂಗ್‌ಹ್ಯಾಮ್, ಜು. 14: ಜೋ ರೂಟ್ (ಔಟಾಗದೆ 76, 76 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಲಿಯಾಮ್ ಡಾಸನ್ (68 ರನ್, 83 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡವು ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದ ಗೆಲುವಿಗೆ 259 ರನ್ ಗುರಿ ನೀಡಿದೆ.
ಮಂಗಳವಾರ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ತಂಡವು ಎರಡು ಅರ್ಧಶತಕಗಳ ಹೊರತಾಗಿಯೂ ಸ್ಪಿನ್ನರ್ ಅಕ್ಷರ್ ಪಟೇಲ್ (4–62) ಅವರ ಸ್ಪಿನ್ ಮೋಡಿಗೆ ತತ್ತರಿಸಿ 47.5 ಓವರ್‌ಗಳಲ್ಲಿ 258 ರನ್ ಗಳಿಸಿ ಆಲೌಟಾಯಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಯಶಸ್ವಿ ಪ್ರದರ್ಶನ ನೀಡಿದರೆ, ಪ್ರಸಿದ್ಧ ಕೃಷ್ಣ (2–50) ಹಾಗೂ ಗುರ್ನೂರ್ ಬ್ರಾರ್ (2–61) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್ ತಂಡವನ್ನು 258 ರನ್‌ಗೆ ನಿಯಂತ್ರಿಸಿದರು.
ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ (43 ರನ್, 45 ಎಸೆತ) ಹಾಗೂ ಜೇಕಬ್ ಬೆಥೆಲ್ (14 ರನ್, 31 ಎಸೆತ) ಮೊದಲ ವಿಕೆಟ್‌ಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಬೆಥೆಲ್, ಡಕೆಟ್ ಹಾಗೂ ಹ್ಯಾರಿ ಬ್ರೂಕ್ (1 ರನ್) ಬೆನ್ನುಬೆನ್ನಿಗೆ ಔಟಾದರು.
200ನೇ ಪಂದ್ಯವನ್ನಾಡಿದ ಜೋಸ್ ಬಟ್ಲರ್ (5 ರನ್) ಅಲ್ಪ ಮೊತ್ತಕ್ಕೆ ಔಟಾದರು. ಸ್ಯಾಮ್ ಕರನ್ (0) ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ 16.4 ಓವರ್‌ಗಳಲ್ಲಿ 80 ರನ್‌ಗೆ ಐದನೇ ವಿಕೆಟ್ ಕಳೆದುಕೊಂಡಿತು. ವಿಲ್ ಜಾಕ್ಸ್ 20 ರನ್ ಗಳಿಸಿ ಔಟಾದರು.
ಆಗ ಜೊತೆಯಾದ ರೂಟ್ ಹಾಗೂ ಡಾಸನ್ ಆರನೇ ವಿಕೆಟ್‌ಗೆ 121 ರನ್ ಸೇರಿಸಿ ತಂಡವನ್ನು ಆಧರಿಸಿದರು. ಔಟಾಗದೆ 76 ರನ್ ಗಳಿಸಿದ ರೂಟ್ ಅವರು ಇಂಗ್ಲೆಂಡ್ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
►ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 47.5 ಓವರ್ ಗಳಲ್ಲಿ 258 ರನ್‌ಗೆ ಆಲೌಟ್
(ಜೋ ರೂಟ್ ಔಟಾಗದೆ 76, ಲಿಯಾಮ್ ಡಾಸನ್ 68, ಬೆನ್ ಡಕೆಟ್ 43, ಅಕ್ಷರ್ ಪಟೇಲ್ 4–62, ಪ್ರಸಿದ್ಧ ಕೃಷ್ಣ 2–50, ಗುರ್ನೂರ್ ಬ್ರಾರ್ 2–61)