2027ರ ವಿಶ್ವಕಪ್ ಯೋಜನೆಯಲ್ಲಿ ವಿರಾಟ್-ರೋಹಿತ್ ಪ್ರಮುಖ ಭಾಗವಾಗಿ ಮುಂದುವರಿಯಲಿದ್ದಾರೆ: ಗಿಲ್
ಹೊಸ ದಿಲ್ಲಿ: 2027ರ ಏಕದಿನ ವಿಶ್ವಕಪ್ ಗಾಗಿ ಭಾರತ ತಂಡವನ್ನು ಸಿದ್ಧಪಡಿಸುವಾಗ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯು ಯೋಜನೆಗಳ ಪ್ರಮುಖ ಭಾಗವಾಗಿ ಮುಂದುವರಿಯಲಿದ್ದಾರೆ ಎಂದು ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಹೇಳಿದ್ದಾರೆ. ಹಿರಿಯ ಆಟಗಾರರನ್ನು ಪ್ರತಿ ಸರಣಿಯಲ್ಲೂ ಪರೀಕ್ಷೆಗೆ ಒಡ್ಡಬಾರದು ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿಕೆಯ ಬೆನ್ನಲ್ಲೇ ಈ ಹೇಳಿಕೆಗಳು ಬಂದಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಈ ಇಬ್ಬರು ಹಿರಿಯ ಬ್ಯಾಟರ್‌ಗಳ ಭವಿಷ್ಯದ ಕುರಿತಾದ ವದಂತಿಗಳಿಗೆ ಉತ್ತರಿಸಿದ ಗಿಲ್, ತಂಡದಲ್ಲಿ ಅವರಿಗಿರುವ ಸ್ಥಾನದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ ಎಂದು ತಿಳಿಸಿದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿರುವ ಗಿಲ್ , "ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಕಳೆದ ಒಂದು ದಶಕದಿಂದ ಭಾರತೀಯ ಬ್ಯಾಟಿಂಗ್ ಲೈನ್ಅಪ್ ನ ಬೆನ್ನೆಲುಬಾಗಿದ್ದಾರೆ. ಮತ್ತು ಅವರು ನಮ್ಮ ತಂಡದ ಅತ್ಯಂತ ಅವಿಭಾಜ್ಯ ಅಂಗವಾಗಿ ಮುಂದುವರಿಯಲಿದ್ದಾರೆ," ಎಂದು ಹೇಳಿದರು.
ಭಾರತ ತಂಡದ ಬದಲಾವಣೆಯ ಯೋಜನೆಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಜಿತ್ ಅಗರ್ಕರ್ “ಹಿರಿಯ ಆಟಗಾರರನ್ನು ಪ್ರತಿ ಸರಣಿಯಲ್ಲೂ ಪರೀಕ್ಷೆಗೆ ಒಡ್ಡಬಾರದು” ಎಂದು ಇತ್ತೀಚೆಗೆ ಹೇಳಿದ್ದರು. ಇದೀಗ ತಂಡದ ನಾಯಕ ಗಿಲ್ ಕೂಡಾ ಪ್ರತಿಕ್ರಿಯಿಸಿದ್ದಾರೆ.
"ಯಾವುದೇ ತಂಡದಲ್ಲಿ ಅನುಭವದ ಲೈನ್ಅಪ್ ಇದ್ದರೆ, ಒತ್ತಡದ ಸಂದರ್ಭದಲ್ಲಿ ಆ ಅನುಭವ ತುಂಬಾ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಪರಿಸ್ಥಿತಿಯನ್ನು ಹಲವು ಬಾರಿ ಎದುರಿಸಿದ್ದಾರೆ . ಹಾಗಾಗಿ, ಒತ್ತಡದಲ್ಲಿದ್ದಾಗ ಅನುಭವವು ನಿರಾಳತೆಯ ಭಾವನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ." ಎಂದು ಗಿಲ್ ಹೇಳಿದರು.