×
Ad

ಭಾರತ-ಇಂಗ್ಲೆಂಡ್ ಪ್ರಥಮ ಏಕದಿನ ಪಂದ್ಯ | ಅಭ್ಯಾಸ ಅವಧಿಯ ವೇಳೆ ಪರಸ್ಪರ ಮಾತುಕತೆ ನಡೆಸದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್!

Update: 2026-07-14 16:52 IST

ವಿರಾಟ್ ಕೊಹ್ಲಿ ,  ಗೌತಮ್ ಗಂಭೀರ್ | Photo Credit : X \ @cricsam02

ಬರ್ಮಿಂಗ್ ಹ್ಯಾಮ್: ಐರ್ಲೆಂಡ್ ವಿರುದ್ಧ 0-2, ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಟಿ-20 ಸರಣಿಯನ್ನು ಕಳೆದುಕೊಂಡು ಆಘಾತ ಅನುಭವಿಸಿರುವ ಭಾರತ ತಂಡ, ಇಂದಿನಿಂದ ಇಂಗ್ಲೆಂಡ್ ತಂಡದ ವಿರುದ್ಧ ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಆದರೆ, ಇಲ್ಲಿ ನಡೆದ ಅಭ್ಯಾಸ ಅವಧಿಯ ವೇಳೆ ಭಾರತ ತಂಡದ ತಾರಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಯಾವುದೇ ಮಾತುಕತೆ ನಡೆಯದಿದ್ದದ್ದು ಚರ್ಚೆಗೆ ಕಾರಣವಾಗಿದೆ. ವಿರಾಟ್ ಕೊಹ್ಲಿಯೊಂದಿಗೆ ಯಾವುದೇ ನೇರ ಮಾತುಕತೆ ನಡೆಸದ ಗೌತಮ್ ಗಂಭೀರ್, ತಂಡದ ಇತರ ಸದಸ್ಯರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದು ಗಮನ ಸೆಳೆಯುವಂತಿತ್ತು ಎಂದು Times of India ವರದಿ ಮಾಡಿದೆ.

ಅಭ್ಯಾಸ ಅವಧಿಯ ವೇಳೆ ಗೌತಮ್ ಗಂಭೀರ್ ಅವರು ತಂಡದ ನಾಯಕ ಶುಭಮನ್ ಗಿಲ್, ರೋಹಿತ್ ಶರ್ಮ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಾಕ್ ಹಾಗೂ ನೆರವು ಸಿಬ್ಬಂದಿ ವರ್ಗದ ಇತರ ಸದಸ್ಯರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ, ವಿರಾಟ್ ಕೊಹ್ಲಿಯೊಂದಿಗೆ ಅವರು ಯಾವುದೇ ನೇರ ಮಾತುಕತೆ ನಡೆಸಲಿಲ್ಲ.

ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಅಂತಿಮ ಅಭ್ಯಾಸ ಅವಧಿಯ ವೇಳೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಕಣ್ಣಿಗೆ ಕಾಣುವಂತಹ ಯಾವುದೇ ಮಾತುಕತೆ ನಡೆಯದೇ ಇದ್ದದ್ದು ಚರ್ಚೆಯ ಕೇಂದ್ರ ಬಿಂದುವಾಗಿ ಬದಲಾಗಿದೆ.

ಅಭ್ಯಾಸ ಅವಧಿಯ ವೇಳೆ ನಾಯಕ ಶುಭಮನ್ ಗಿಲ್, ಟಿ-20 ನಾಯಕ ಶ್ರೇಯಸ್ ಅಯ್ಯರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಇಡೀ ಬೌಲಿಂಗ್ ವಿಭಾಗ ಸೇರಿದಂತೆ ತಂಡದ ಎಲ್ಲ 15 ಸದಸ್ಯರೂ ಉಪಸ್ಥಿತರಿದ್ದರು. ಗಾಯಗೊಂಡಿರುವ ಹರ್ಷಿತ್ ರಾಣಾ ಬದಲಿಗೆ ಏಕದಿನ ತಂಡಕ್ಕೆ ಸೇರ್ಪಡೆಯಾಗಿರುವ ಪ್ರಿನ್ಸ್ ಯಾದವ್ ಕೂಡಾ ತಂಡದೊಂದಿಗೆ ಅಭ್ಯಾಸದಲ್ಲಿ ಪಾಲ್ಗೊಂಡರು.

ಉಳಿದಂತೆ ನಿಯಮಿತ ಅಭ್ಯಾಸ ಅವಧಿಯಾಗಿದ್ದ ಈ ಅವಧಿಯಲ್ಲಿ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಅಭ್ಯಾಸ ನಡೆಸಿದರು. ಶ್ರೇಯಸ್ ಅಯ್ಯರ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡದಿದ್ದರೂ, ಉಳಿದ ಬ್ಯಾಟಿಂಗ್ ವಿಭಾಗ ನೆಟ್ಸ್ ಅಭ್ಯಾಸದಲ್ಲಿ ಪಾಲ್ಗೊಂಡಿತು.

ಸುದೀರ್ಘ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ, ಬಳಿಕ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಾಕ್ ರೊಂದಿಗೆ ಮಾತುಕತೆ ನಡೆಸುತ್ತಿದ್ದದ್ದು ಕಂಡು ಬಂದಿತು.

ಆದರೆ, ಇತರ ಹಿರಿಯ ಆಟಗಾರರೊಂದಿಗೆ ಮಾತುಕತೆ ನಡೆಸಿದ ಗೌತಮ್ ಗಂಭೀರ್, ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದ ವಿರಾಟ್ ಕೊಹ್ಲಿಯೊಂದಿಗೆ ಯಾವುದೇ ಮಾತುಕತೆ ನಡೆಸಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News