ನರೇಂದ್ರ ಮೋದಿ | Photo Credit : PTI 

ಹೊಸದಿಲ್ಲಿ: ಇತ್ತೀಚೆಗೆ ಜಪಾನಿನಲ್ಲಿ ಕೊನೆಗೊಂಡಿರುವ 2026ರ ಆವೃತ್ತಿಯ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದ ಭಾರತದ ಪ್ಯಾರಾ ಅತ್ಲೀಟ್‌ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಪ್ರಶಂಶಿಸಿದರು.

ಪ್ಯಾರಾ ಅತ್ಲೀಟ್‌ಗಳ ಸಾಧನೆಗಳು ಹಾಗೂ ಸಂಘರ್ಷಗಳು ಇಡೀ ದೇಶಕ್ಕೆ ಸ್ಫೂರ್ತಿ ಸೆಲೆಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ, ಈ ಐತಿಹಾಸಿಕ ಯಶಸ್ಸನ್ನು 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನತ್ತ ದಾಪುಗಾಲಿಡಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಮೋದಿ, ಜಪಾನಿನಲ್ಲಿ ನಡೆದ ಐಚಿ-ನಗೋಯ ಕ್ರೀಡಾಕೂಟದಲ್ಲಿ ಭಾರತೀಯ ತಂಡ ತೋರಿದ್ದ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಭಿನಂದಿಸಿದರು.

97 ಪ್ಯಾರಾ ಕ್ರೀಡಾಪಟುಗಳು ಒಟ್ಟು 114 ಪದಕಗಳನ್ನು(30 ಚಿನ್ನ, 35 ಬೆಳ್ಳಿ, 49 ಕಂಚು)ಗೆಲ್ಲುವ ಮೂಲಕ ಭಾರತ ತಂಡವು ಒಟ್ಟಾರೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿತ್ತು.

‘‘ನಿಮ್ಮ ಅದ್ಭುತ ಪ್ರದರ್ಶನವು ಕ್ರೀಡಾ ಜಗತ್ತಿನಲ್ಲಿ ಭಾರತವು ಒಂದು ಮಹಾನ್ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ತೋರಿಸುತ್ತದೆ. ನೀವು ಕೇವಲ ಪದಕವನ್ನು ಗೆದ್ದಿಲ್ಲ, ಬದಲಾಗಿ ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದೀರಿ’’ಎಂದು ಮೋದಿ ಹೇಳಿದ್ದಾರೆ.

‘‘ನಿಮ್ಮ ಹೋರಾಟಗಳು ಹಾಗೂ ಸಾಧನೆಗಳು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿವೆ. ಹಿಂದೆ ತಮ್ಮ ಮಕ್ಕಳು ಕ್ರೀಡಾ ವೃತ್ತಿಜೀವನ ಆರಿಸಿಕೊಳ್ಳುವುದಕ್ಕೆ ಬೆಂಬಲ ನೀಡಲು ಪೋಷಕರು ಭಯಪಡುತ್ತಿದ್ದರು. ಪ್ರತಿಭೆಗೆ ಬೆಂಬಲ ನೀಡದ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ಈಗ ನೀವು ಹೇಗೆ ಛಲ ಬಿಡದೆ ಮುಂದುವರಿದಿರೋ ಹಾಗೆಯೇ ನಾವೂ ಕೂಡ ನಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸಿದೆವು’’ಎಂದು ಅವರು ಹೇಳಿದರು.

ಎರಡೂ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ಹಾಗೂ ದೃಷ್ಟಿಹೀನ ಓಟಗಾರ್ತಿ ಸಿಮ್ರಾನ್ ಸೇರಿದಂತೆ ಅವಳಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳು ಪ್ರಧಾನಿಯೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕ್ರೀಡಾಪಟುಗಳು ಪ್ರಧಾನಿಗೆ ಸಿಹಿ ತಿಂಡಿ ತಿನ್ನಿಸುತ್ತಿರುವುದು ಕಂಡುಬಂತು. ಈ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕ್ರೀಡಾ ಖಾತೆಯ ರಾಜ್ಯ ಸಚಿವೆ ರಕ್ಷಾ ಖಡ್ಸೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor