ಮನು ಭಾಕರ್ | Photo Credit : PTI 

ದೋಹಾ: ಭಾರತೀಯ ಶೂಟರ್‌ಗಳಾದ ಮನು ಭಾಕರ್ ಹಾಗೂ ಸುರುಚಿ ಇಂದರ್ ಸಿಂಗ್ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಎಡವಿ ನಿರಾಶೆಗೊಳಿಸಿದರು.

ಪದಕದಿಂದ ವಂಚಿತರಾದ ಮನು ಹಾಗೂ ಸುರುಚಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನೂ ತಪ್ಪಿಸಿಕೊಂಡರು.

2024ರ ಪ್ಯಾರಿಸ್ ಗೇಮ್ಸ್‌ನಲ್ಲಿ ಅವಳಿ ಕಂಚು ಜಯಿಸಿದ್ದ ಮನು 179.9 ಅಂಕ ಗಳಿಸಿ ಐದನೇ ಸ್ಥಾನ ಪಡೆದರು. ಏಶ್ಯನ್ ಗೇಮ್ಸ್ ಮಿಕ್ಸೆಡ್ ಟೀಮ್‌ನಲ್ಲಿ ಚಿನ್ನದ ಪದಕ ವಿಜೇತೆ ಸುರುಚಿ 158.3 ಅಂಕ ಗಳಿಸಿ ಆರನೇ ಸ್ಥಾನ ಪಡೆದರು. ಶೂಟಿಂಗ್‌ನಲ್ಲಿ ಭಾರತದ ವೈಯಕ್ತಿಕ ಪದಕ ಹಾಗೂ ಒಲಿಂಪಿಕ್ಸ್ ಕೋಟಾ ಸ್ಥಾನಕ್ಕಾಗಿ ಕಾಯುವಿಕೆ ಮುಂದುವರಿದಿದೆ.

ಎಂಟು ಶೂಟರ್‌ಗಳಿದ್ದ ಫೈನಲ್ ಸ್ಪರ್ಧೆಯಲ್ಲಿ ಚೀನಾ ತಂಡವು ಪ್ರಾಬಲ್ಯ ಸಾಧಿಸಿದ್ದು 242.4 ಅಂಕ ಗಳಿಸಿ ಚಿನ್ನದ ಪದಕ ಜಯಿಸಿತು. ಚೀನಾದ ಇನ್ನೋರ್ವ ಶೂಟರ್ ಯಾವೊ ಕ್ಸಿಯಾನ್‌ಕ್ಸುನ್ 242.1 ಅಂಕ ಗಳಿಸಿ ಬೆಳ್ಳಿ ಗೆದ್ದರು. ಹಂಗೇರಿಯದ ವೆರೊನಿಕಾ(222.1)ಕಂಚಿನ ಪದಕ ತನ್ನದಾಗಿಸಿಕೊಂಡರು. ಈ ಮೂವರು ಪದಕ ವಿಜೇತರು ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನ ಪಡೆದಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಇಬ್ಬರು ಭಾರತೀಯ ಸ್ಟಾರ್‌ಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ.

ಫೈನಲ್ ಸ್ಪರ್ಧೆಯುದ್ದಕ್ಕೂ ಮನು ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿದರು. ಸುರುಚಿ ಕೂಡ ಕಳಪೆ ಪ್ರದರ್ಶನ ನೀಡಿದರು.

ಮನು(583), ಸುರುಚಿ(580) ಹಾಗೂ ಸೈನ್ಯಮ್(575) ಒಟ್ಟಾಗಿ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಭಾರತ ತಂಡವು 1,738 ಅಂಕ ಗಳಿಸಿದರೆ, ಚೀನಾ 1,745 ಅಂಕ ಗಳಿಸಿ ಚಿನ್ನದ ಪದಕ ಜಯಿಸಿತು.

ಪ್ರತೀ ದೇಶದ ಮೂರು ಶೂಟರ್‌ಗಳ ಒಟ್ಟು ಕ್ವಾಲಿಫಿಕೇಶನ್ ಸ್ಕೋರ್‌ಗಳು ತಂಡದ ಸ್ಥಾನಮಾನ ನಿರ್ಧರಿಸಲಿದೆ.

ವಿಶ್ವ ಚಾಂಪಿಯನ್‌ಶಿಪ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ವೈಯಕ್ತಿಕ ಕೋಟಾ ಸ್ಥಾನಗಳನ್ನು ಕಲ್ಪಿಸುತ್ತಿರುವ ಮೊದಲ ಪ್ರಮುಖ ಶೂಟಿಂಗ್ ಸ್ಪರ್ಧಾವಳಿಯಾಗಿದೆ. ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ಭಾರತವು ಚಾಂಪಿಯನ್‌ಶಿಪ್‌ನಲ್ಲಿ ಇನ್ನಷ್ಟೇ ವೈಯಕ್ತಿಕ ಪದಕ ಗೆಲ್ಲಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor