ಐಎಸ್ಎಸ್ಎಫ್ ಶೂಟಿಂಗ್ ವಿಶ್ವ ಚಾಂಪಿಯನ್ಶಿಪ್ 2026 | ಪುರುಷರ 50 ಮೀಟರ್ ಪಿಸ್ತೂಲ್: ಭಾರತ ತಂಡಕ್ಕೆ ಚಿನ್ನ;
ರವೀಂದರ್ಗೆ ವೈಯಕ್ತಿಕ ಬೆಳ್ಳಿ
Photo Credit ; X
ದೋಹಾ (ಖತರ್): ಖತರ್ನ ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪುರುಷರ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ.
ರವೀಂದರ್ ಸಿಂಗ್, ಸೌರಭ್ ಚೌಧರಿ ಮತ್ತು ಅಮನ್ಪ್ರೀತ್ ಸಿಂಗ್ ಅವರನ್ನೊಳಗೊಂಡ ಭಾರತೀಯ ತ್ರಿವಳಿ ತಂಡವು ಒಟ್ಟು 1659-24x ಅಂಕಗಳನ್ನು ಗಳಿಸಿ ತಂಡ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಚೀನಾ ತಂಡವು 1648-26x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ದಕ್ಷಿಣ ಕೊರಿಯ 1643-26x ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.
ವೈಯಕ್ತಿಕ ಫೈನಲ್ನಲ್ಲಿ, ರವೀಂದರ್ ಒಟ್ಟು 559-11x ಅಂಕಗಳನ್ನು ಗಳಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ವೈಯಕ್ತಿಕ ತಟಸ್ಥ ಕ್ರೀಡಾಪಟುವಾಗಿ ಸ್ಪರ್ಧಿಸಿದ್ದ ರಶ್ಯದ ಆ್ಯಂಟನ್ ಅರಿಸ್ಟಾರ್ಕೊವ್ 561-9x ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ರೊಮೇನಿಯದ ಲುಕಾ ಜೊಲ್ಡಿಯಾ 558-5x ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಈ ಕೂಟವು ಒಲಿಂಪಿಕ್ಸ್ನ ಭಾಗವಾಗಿಲ್ಲದಿದ್ದರೂ, ಒಲಿಂಪಿಕ್ಸ್ನ ಭಾಗವಾಗಿರುವ 12 ವೈಯಕ್ತಿಕ ಸ್ಪರ್ಧೆಗಳ ಪೈಕಿ ಪ್ರತಿಯೊಂದರಲ್ಲೂ ಮೂರು ಕೋಟಾ ಸ್ಥಾನಗಳು (ಒಟ್ಟು 36 ಸ್ಥಾನಗಳು) ಇಲ್ಲಿ ಲಭ್ಯವಿವೆ. ಭಾರತವು ಈ ಸ್ಪರ್ಧೆಗಳಲ್ಲಿ 35 ಶೂಟರ್ಗಳನ್ನು ಕಣಕ್ಕಿಳಿಸಿದೆ.