ನಿವೃತ್ತಿಗೆ ಮೊದಲು ಹಾಕಿ ವಿಶ್ವಕಪ್ ಗೆಲ್ಲುವ ಗುರಿ ಇಟ್ಟಿರುವ ಮನ್‌ಪ್ರೀತ್ ಸಿಂಗ್
ಮನ್‌ಪ್ರೀತ್ ಸಿಂಗ್ | Photo Credit ; PTI
ಹೊಸದಿಲ್ಲಿ, ಜು.24: ಹಿರಿಯ ಮಿಡ್ ಫೀಲ್ಡರ್ ಮನ್‌ಪ್ರೀತ್ ಸಿಂಗ್ ತನ್ನ ಹಾಕಿ ಪಯಣದಲ್ಲಿ ಹಲವಾರು ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಈ ತನಕ ವಿಶ್ವಕಪ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಿಲ್ಲ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಂತರ ನಿವೃತ್ತಿಯಾಗುವ ಮೊದಲು ವಿಶ್ವಕಪ್ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
ಮಾಜಿ ನಾಯಕ ಮನ್‌ಪ್ರೀತ್ ಅವರು ಟೋಕಿಯೊ ಹಾಗೂ ಪ್ಯಾರಿಸ್‌ನಲ್ಲಿ ಸತತವಾಗಿ ಕಂಚಿನ ಪದಕ ಜಯಿಸಿದ್ದರು. ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ(2014ರ ಇಂಚಿಯೋನ್ ಹಾಗೂ 2022ರ ಹಾಂಗ್‌ಝೌ)ಚಿನ್ನದ ಪದಕ ಜಯಿಸಿದ್ದರು. 2018ರಲ್ಲಿ ಜಕಾರ್ತದಲ್ಲಿ ಕಂಚಿನ ಪದಕ ಜಯಿಸಿದ್ದರು.
34ರ ಹರೆಯದ ಮನ್‌ಪ್ರೀತ್ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಭಾರತವು ವಿಶ್ವಕಪ್ ಗೆಲ್ಲದೆ 51 ವರ್ಷಗಳೇ ಕಳೆದಿವೆ. 1975ರ ಆವೃತ್ತಿಯ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಚಿನ್ನದ ಪದಕ ಜಯಿಸಿತ್ತು.
ನೆದರ್‌ಲ್ಯಾಂಡ್ಸ್ ಹಾಗೂ ಬೆಲ್ಜಿಯಮ್‌ನ ಜಂಟಿ ಆತಿಥ್ಯದಲ್ಲಿ ಆಗಸ್ಟ್ 15ರಿಂದ 30ರ ತನಕ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯ ವೇಳೆ ಭಾರತದ ವಿಶ್ವಕಪ್ ಬರವನ್ನು ನೀಗಿಸುವ ವಿಶ್ವಾಸದಲ್ಲಿದ್ದಾರೆ.
‘‘ವೈಯಕ್ತಿಕವಾಗಿ ದೀರ್ಘ ಕಾಲ ನನ್ನ ದೇಶವನ್ನು ಪ್ರತಿನಿಧಿಸುವ ಬಯಕೆ ಇದೆ. ಸಾಧ್ಯವಾದಷ್ಟು ಹೆಚ್ಚು ಪದಕಗಳನ್ನು ಗೆಲ್ಲುವೆ. ನಾವು ಒಲಿಂಪಿಕ್ಸ್‌ನಲ್ಲಿ ಸತತ ಪದಕಗಳನ್ನು ಗೆದ್ದಿದ್ದೇವೆ. ಆದರೆ, ವಿಶ್ವಕಪ್ ಪದಕ ಈ ತನಕ ಕೈಗೆಟುಕಿಲ್ಲ. ನಾವು 1975ರಲ್ಲಿ ಕೊನೆಯ ಬಾರಿ ವಿಶ್ವಕಪ್ ಗೆದ್ದಿರುವ ಕಾರಣ ಈ ಬಾರಿ ಗೆಲ್ಲಬೇಕೆಂಬ ಬಯಕೆ ಇದೆ. ಈ ಸಲ ನಮಗದು ಸಾಧ್ಯವಿದೆ ಎಂಬ ವಿಶ್ವಾಸವಿದೆ. ನನ್ನ ತಂಡದ ಮೇಲೆ ನಂಬಿಕೆ ಇದೆ. ಕಳೆದ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನಾವು ತೋರಿದ್ದ ಪ್ರದರ್ಶನವನ್ನೇ ವಿಶ್ವಕಪ್‌ನಲ್ಲೂ ಪುನರಾವರ್ತಿಸುವ ಭರವಸೆ ಇದೆ’’ಎಂದು ಮನ್‌ಪ್ರೀತ್ ಹೇಳಿದ್ದಾರೆ.
‘‘ನನ್ನ ಮೇಲೆ ಭಾರೀ ನಿರೀಕ್ಷೆಗಳಿವೆ. ಏಕೆಂದರೆ ಕ್ರೀಡಾಪಟುವಿನ ಜೀವನವೇ ಅತ್ಯಂತ ಕಡಿಮೆ ಅವಧಿಯದ್ದಾಗಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. 24 ಇಲ್ಲವೇ 35 ವಯಸ್ಸಿನವರಾಗಿದ್ದಾಗ ಗಾಯ ಯಾವಾಗ ಆಗುತ್ತದೆ ಎಂದು ಗೊತ್ತಾಗುವುದಿಲ್ಲ. ಹೀಗಾಗಿ ಪ್ರತೀ ಟೂರ್ನಿಯನ್ನು ನಮ್ಮ ಕೊನೆಯ ಟೂರ್ನಿಯಾಗಿ ಪರಿಗಣಿಸಬೇಕು. ವಿಶ್ವಕಪ್ ನಂತರ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಕ್ರೀಡಾಪಟುವಾಗಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ತನಕ ಆಡುವುದು ನನ್ನ ವೈಯಕ್ತಿಕ ಗುರಿ. ನನ್ನ ಫಿಟ್ನೆಸ್ ಕಾಯ್ದುಕೊಂಡು, 100 ಶೇ. ಪ್ರಯತ್ನಪಡುವೆ’’ ಎಂದು ಇತ್ತೀಚೆಗೆ ಅತಿ ಹೆಚ್ಚು ಹಾಕಿ ಪಂದ್ಯವನ್ನಾಡಿದ ಭಾರತೀಯ ಹಾಕಿ ಆಟಗಾರ ಎನಿಸಿಕೊಂಡು ಲೆಜೆಂಡರಿ ದಿಲಿಪ್ ಟಿರ್ಕಿ ದಾಖಲೆ ಮುರಿದಿರುವ ಮನ್‌ಪ್ರೀತ್ ಹೇಳಿದ್ದಾರೆ.
ವಿಶ್ವಕಪ್‌ಗೆ ಭಾರತ ತಂಡದ ತಯಾರಿಯ ಬಗ್ಗೆ ಮಾತನಾಡಿದ ಮನ್‌ಪ್ರೀತ್, ‘‘ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ತಂಡವು ರಕ್ಷಣಾ ವಿಭಾಗದತ್ತ ಹೆಚ್ಚು ಗಮನ ನೀಡಲಿದೆ. ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸುವತ್ತ ನಾವು ಕಾರ್ಯೋನ್ಮುಖವಾಗಬೇಕು. ಡಿಫೆನ್ಸ್ ವಿಭಾಗವು ಪ್ರಗತಿಯಾಗಬೇಕು. ರೂರ್ಕೆಲಾದಲ್ಲಿ ನಾವು ಸುಲಭ ಗೋಲು ಬಿಟ್ಟುಕೊಟ್ಟಿದ್ದೆವು’’ ಎಂದರು.
ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಡಿ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ತಂಡದೊಂದಿಗಿದೆ. ಆಗಸ್ಟ್ 19ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಲಿದೆ.