ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ವಿರುದ್ಧದ 115 ಆರೋಪಗಳ ಪೈಕಿ 114 ಸಾಬೀತು
ಶಿಕ್ಷೆ ಇನ್ನೂ ಪ್ರಕಟವಾಗಿಲ್ಲ; ಸಿಟಿಯಿಂದ ಮೇಲ್ಮನವಿ ಸಾಧ್ಯತೆ
Photo Credit: AP
ಮ್ಯಾಂಚೆಸ್ಟರ್, ಸೆ.25: ಪ್ರೀಮಿಯರ್ ಲೀಗ್ ನ ಆರ್ಥಿಕ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ವಿರುದ್ಧದ 115 ಆರೋಪಗಳ ಪೈಕಿ 114 ಆರೋಪಗಳು ಸಾಬೀತಾಗಿವೆ. ಪ್ರಕರಣದಲ್ಲಿ ಸಿಟಿಗೆ ವಿಧಿಸಬೇಕಾದ ಶಿಕ್ಷೆಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ತೀರ್ಪಿನ ವಿರುದ್ಧ ಕ್ಲಬ್ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ ಎಂದು telegraph.co.uk ವರದಿ ಮಾಡಿದೆ.
ಪ್ರಶಸ್ತಿಗಳನ್ನು ಹಿಂಪಡೆಯುವುದು, ಅಂಕಗಳನ್ನು ಕಡಿತಗೊಳಿಸುವುದು, ಆರ್ಥಿಕ ದಂಡ ವಿಧಿಸುವುದು ಅಥವಾ ಪ್ರೀಮಿಯರ್ ಲೀಗ್ನಿಂದ ಕೆಳಗಿಳಿಸುವುದು (relegation) ಸಿಟಿಗೆ ವಿಧಿಸಬಹುದಾದ ಶಿಕ್ಷೆಗಳಲ್ಲಿ ಸೇರಿವೆ.
“ಪ್ರೀಮಿಯರ್ ಲೀಗ್ ನ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಪ್ರಮುಖ ಹಂತಗಳು ಪೂರ್ಣಗೊಳ್ಳಬೇಕಿದ್ದು, ಪ್ರಕ್ರಿಯೆ ಕಟ್ಟುನಿಟ್ಟಾದ ಗೌಪ್ಯತೆಗೆ ಒಳಪಟ್ಟಿದೆ. ಹೀಗಾಗಿ, ಮ್ಯಾಂಚೆಸ್ಟರ್ ಸಿಟಿ ಎಫ್ಸಿಯ ನಿಲುವು ಫೆಬ್ರವರಿ 2023ರಲ್ಲಿ ಕ್ಲಬ್ ನೀಡಿದ್ದ ಹೇಳಿಕೆಗೆ ಅನುಗುಣವಾಗಿಯೇ ಮುಂದುವರಿಯಲಿದೆ” ಎಂದು ಸಿಟಿಯ ವಕ್ತಾರರು ತಿಳಿಸಿದ್ದಾರೆ.
“ಪ್ರೀಮಿಯರ್ ಲೀಗ್ ಮಂಡಳಿ ಮತ್ತು ಕಾರ್ಯನಿರ್ವಾಹಕರು ಯಾವುದೇ ಪಕ್ಷಪಾತದ ಪ್ರಭಾವದಿಂದ ಮುಕ್ತವಾಗಿ, ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ನ್ಯಾಯಯುತ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಆಧಾರದ ಮೇಲೆ ಕ್ಲಬ್ ಕಳೆದ ಎಂಟು ವರ್ಷಗಳಿಂದ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಶ್ರದ್ಧೆಯಿಂದ ಗೌರವಿಸಿದೆ” ಎಂದೂ ಅವರು ಹೇಳಿದ್ದಾರೆ.
ಈ ಪ್ರಕರಣ 2009-10ರಿಂದ 2022-23ರವರೆಗಿನ 14 ಋತುಗಳಿಗೆ ಸಂಬಂಧಿಸಿದೆ. 2008ರಲ್ಲಿ ಅಬುಧಾಬಿ ರಾಜಮನೆತನದ ಸದಸ್ಯ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನ ಉಪಾಧ್ಯಕ್ಷ ಶೇಖ್ ಮನ್ಸೂರ್ ಅವರ ಅಬುಧಾಬಿ ಯುನೈಟೆಡ್ ಗ್ರೂಪ್ ಸಿಟಿಯ ಮಾಲೀಕತ್ವ ವಹಿಸಿಕೊಂಡ ಬಳಿಕದ ಮೊದಲ ಪೂರ್ಣ ಋತು 2009-10 ಆಗಿತ್ತು.
ಈ ಅವಧಿಯಲ್ಲಿ ಸಿಟಿ ಏಳು ಪ್ರೀಮಿಯರ್ ಲೀಗ್ ಪ್ರಶಸ್ತಿಗಳು, ಆರು ಲೀಗ್ ಕಪ್ ಗಳು, ಮೂರು ಎಫ್ಎ ಕಪ್ ಗಳು ಮತ್ತು ಒಂದು ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿದೆ. ಬಳಿಕ ಮತ್ತೊಂದು ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದು ಸತತ ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಮೊದಲ ಕ್ಲಬ್ ಎಂಬ ದಾಖಲೆಯನ್ನೂ ನಿರ್ಮಿಸಿದೆ. ಯುಇಎಫ್ಎ ಸೂಪರ್ ಕಪ್, ಫಿಫಾ ಕ್ಲಬ್ ವಿಶ್ವಕಪ್ ಹಾಗೂ ಕಳೆದ ಋತುವಿನಲ್ಲಿ ಎಫ್ಎ ಕಪ್ ಮತ್ತು ಲೀಗ್ ಕಪ್ ಗಳ ‘ಡಬಲ್’ನ್ನೂ ಗೆದ್ದಿದೆ.
ಒಟ್ಟಾರೆ, ಶೇಖ್ ಮನ್ಸೂರ್ ಮಾಲೀಕತ್ವ ವಹಿಸಿಕೊಂಡ ಬಳಿಕ ಸಿಟಿ 20 ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದೆ. ಈ ಪ್ರಶಸ್ತಿಗಳ ಮೇಲೂ ಪ್ರಕರಣದ ತೀರ್ಪಿನಿಂದ ಅನುಮಾನದ ಕಾರ್ಮೋಡ ಮೂಡಿದೆ.
ಆರೋಪವೇನು?
ಆರೋಪಗಳನ್ನು ಮುಖ್ಯವಾಗಿ ಐದು ಗುಂಪುಗಳಾಗಿ ವಿಂಗಡಿಸಲಾಗಿದೆ.
ಆರ್ಥಿಕ ಮಾಹಿತಿ: 2009-10ರಿಂದ 2017-18ರವರೆಗೆ ಕ್ಲಬ್ ನಿಖರವಾದ ಆರ್ಥಿಕ ಮಾಹಿತಿ ನೀಡಬೇಕು ಮತ್ತು ಪ್ರಾಮಾಣಿಕತೆಯಿಂದ (good faith) ವರ್ತಿಸಬೇಕು ಎಂಬ ನಿಯಮಗಳನ್ನು ಉಲ್ಲಂಘಿಸಿದ ಆರೋಪವಿದೆ.
ಮ್ಯಾನೇಜರ್ ಹಾಗೂ ಆಟಗಾರರ ಸಂಭಾವನೆ: ಮ್ಯಾನೇಜರ್ ಗಳು ಮತ್ತು ಆಟಗಾರರಿಗೆ ನೀಡಿದ ಸಂಭಾವನೆಯ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸದ ಆರೋಪವಿದೆ. ಮ್ಯಾನೇಜರ್ ಗೆ ಸಂಬಂಧಿಸಿದ ಆರೋಪಗಳು 2009-10ರಿಂದ 2012-13ರವರೆಗೆ ಹಾಗೂ ಆಟಗಾರರ ಸಂಭಾವನೆಗೆ ಸಂಬಂಧಿಸಿದ ಆರೋಪಗಳು 2010-11ರಿಂದ 2015-16ರವರೆಗೆ ಸೇರಿವೆ.
ಆ ಅವಧಿಯಲ್ಲಿ ರಾಬರ್ಟೊ ಮನ್ಸಿನಿ ಸಿಟಿಯ ಮ್ಯಾನೇಜರ್ ಆಗಿದ್ದರು. ಅವರಿಗೆ ಸಿಟಿಯೊಂದಿಗಿನ ಸಾಮಾನ್ಯ ಒಪ್ಪಂದದ ಹೊರತಾಗಿ ಅಬುಧಾಬಿ ಮೂಲದ ಕ್ಲಬ್ ನಲ್ಲಿ ಸಲಹಾ ಕೆಲಸಕ್ಕಾಗಿ ಪಾವತಿ ಮಾಡಲಾಗಿತ್ತು ಎಂಬ ಆರೋಪವೂ ಇದೆ. ಈ ಪಾವತಿಗಳ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸದಿರುವುದು ನಿಯಮ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
UEFA ಮತ್ತು ಆರ್ಥಿಕ ನಿಯಮಗಳು: 2013-14ರಿಂದ 2017-18ರವರೆಗೆ ಯುಇಎಫ್ಎ ಪರವಾನಗಿ ಹಾಗೂ ‘ಫೈನಾನ್ಷಿಯಲ್ ಫೇರ್ ಪ್ಲೇ’ ನಿಯಮಗಳನ್ನು ಉಲ್ಲಂಘಿಸಿದ ಆರೋಪವಿದೆ. 2015-16ರಿಂದ 2017-18ರವರೆಗೆ ಪ್ರೀಮಿಯರ್ ಲೀಗ್ ನ ಲಾಭ ಮತ್ತು ಸುಸ್ಥಿರತೆ ನಿಯಮಗಳನ್ನು ಉಲ್ಲಂಘಿಸಿದ ಆರೋಪವೂ ಇದೆ. ಈ ನಿಯಮಗಳ ಉದ್ದೇಶ ಕ್ಲಬ್ಗಳ ವೆಚ್ಚವನ್ನು ಅವುಗಳ ಆದಾಯಕ್ಕೆ ಅನುಗುಣವಾಗಿ ಇರಿಸುವುದಾಗಿದೆ.
ಸಹಕಾರ: ತನಿಖೆಯ ಸಂದರ್ಭದಲ್ಲಿ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವ ಮೂಲಕ ಪ್ರೀಮಿಯರ್ ಲೀಗ್ ನೊಂದಿಗೆ ಪ್ರಾಮಾಣಿಕತೆಯಿಂದ ಸಹಕರಿಸಬೇಕಿದ್ದ ನಿಯಮಗಳನ್ನು ಉಲ್ಲಂಘಿಸಿದ ಆರೋಪವೂ ಇದೆ. ಈ ಆರೋಪಗಳು ಪ್ರೀಮಿಯರ್ ಲೀಗ್ ತನಿಖೆಗೆ ಒಳಪಟ್ಟ ಐದು ಋತುಗಳಿಗೆ ಸಂಬಂಧಿಸಿವೆ.
ಇತರ ಹಣಕಾಸು ವ್ಯವಹಾರಗಳು: ಆಟಗಾರರಿಗೆ ‘ಇಮೇಜ್ ರೈಟ್ಸ್’ (ವ್ಯಕ್ತಿತ್ವದ ಹಕ್ಕುಗಳು) ಪಾವತಿಗಳನ್ನು ನಿಗದಿಪಡಿಸುವ ನಿಯಮಗಳ ಉಲ್ಲಂಘನೆ, ಅಪ್ರಾಪ್ತ ವಯಸ್ಸಿನ ಆಟಗಾರರಿಗೆ ನೀಡಿದ ಪಾವತಿಗಳು ಹಾಗೂ ಪ್ರಾಯೋಜಕತ್ವದ ಹಣದ ನಿಜವಾದ ಮೂಲದ ಬಗ್ಗೆಯೂ ತನಿಖೆ ನಡೆದಿದೆ.
ಪ್ರಾಯೋಜಕರು ವಾಣಿಜ್ಯ ಒಪ್ಪಂದಗಳಿಗೆ ನಿಜವಾಗಿಯೂ ಹಣ ಪಾವತಿಸಿದ್ದರೇ ಅಥವಾ ಅದರ ಗಮನಾರ್ಹ ಭಾಗವನ್ನು ಮಾಲೀಕ ಶೇಖ್ ಮನ್ಸೂರ್ ಅವರೇ ಪಾವತಿಸಿದ್ದರೇ ಎಂಬುದನ್ನೂ ತನಿಖೆ ಪರಿಶೀಲಿಸಿದೆ.
ತನಿಖೆ ಆರಂಭವಾಗಿದ್ದು ಹೇಗೆ?
2018ರಲ್ಲಿ ‘ಫುಟ್ಬಾಲ್ ಲೀಕ್ಸ್’ ದಾಖಲೆಗಳ ಆಧಾರದ ಮೇಲೆ ಜರ್ಮನಿಯ ‘ಡೆರ್ ಸ್ಪೀಗೆಲ್’ ಪತ್ರಿಕೆ ಸಿಟಿ ಆರ್ಥಿಕ ನಿಯಮಗಳನ್ನು ನಿಯಮಿತವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಅದರ ಬಳಿಕ ಡಿಸೆಂಬರ್ 2018ರಲ್ಲಿ ಪ್ರೀಮಿಯರ್ ಲೀಗ್ ತನಿಖೆ ಆರಂಭಿಸಿತು.
ಅದೇ ದಾಖಲೆಗಳ ಆಧಾರದ ಮೇಲೆ ಮನ್ಸಿನಿಗೆ ಸಿಟಿಯೊಂದಿಗಿನ ಒಪ್ಪಂದದ ಹೊರತಾಗಿ ಅಬುಧಾಬಿ ಮೂಲದ ಕ್ಲಬ್ ನಲ್ಲಿ ಸಲಹಾ ಕೆಲಸಕ್ಕಾಗಿ ಪಾವತಿ ಮಾಡಲಾಗಿತ್ತು ಎಂಬ ಆರೋಪವೂ ಬಹಿರಂಗವಾಗಿತ್ತು.
ಆಯೋಗ ತನ್ನ ಸಂಪೂರ್ಣ ತನಿಖಾ ವರದಿ ಪ್ರಕಟಿಸಿದ ಬಳಿಕವಷ್ಟೇ ಆರೋಪಗಳ ಕುರಿತು ಪೂರ್ಣ ವಿವರ ಲಭ್ಯವಾಗಲಿದೆ.
ಫೆಬ್ರವರಿ 2023ರಲ್ಲಿ ಪ್ರೀಮಿಯರ್ ಲೀಗ್, “ಹಲವಾರು ನಿಯಮ ಉಲ್ಲಂಘನೆಗಳ ಆರೋಪಗಳನ್ನು” ಸ್ವತಂತ್ರ ಆಯೋಗಕ್ಕೆ ವಹಿಸಿರುವುದಾಗಿ ತಿಳಿಸಿತ್ತು. ಪ್ರತಿಯೊಂದು ಋತುವಿನಲ್ಲಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದ್ದ ನಿರ್ದಿಷ್ಟ ನಿಯಮಗಳ ವಿವರಗಳನ್ನೂ ನೀಡಲಾಗಿತ್ತು.
ಆದರೆ ಆರೋಪಗಳ ನಿಖರ ಸಂಖ್ಯೆ ಆಗ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ವಿವಿಧ ವರದಿಗಳಲ್ಲಿ 115ರಿಂದ 130ರವರೆಗೆ ಸಂಖ್ಯೆಗಳು ಪ್ರಕಟವಾಗಿದ್ದವು. ಶುಕ್ರವಾರದ ವರದಿಯ ಪ್ರಕಾರ ಒಟ್ಟು ಆರೋಪಗಳ ಸಂಖ್ಯೆ 115.
ಸಿಟಿ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ತನ್ನ ಬಳಿ “ನಿರಾಕರಿಸಲಾಗದ ಸಾಕ್ಷ್ಯ”ವಿದ್ದು, “ಈ ವಿಷಯವು ಶಾಶ್ವತವಾಗಿ ಇತ್ಯರ್ಥಗೊಳ್ಳುವುದನ್ನು ಎದುರು ನೋಡುತ್ತಿದ್ದೇವೆ” ಎಂದು 2023ರಲ್ಲಿ ಕ್ಲಬ್ ಹೇಳಿತ್ತು.
2024ರ ಸೆಪ್ಟೆಂಬರ್ನಲ್ಲಿ ವಿಚಾರಣೆ ಆರಂಭವಾದಾಗ ಆಗಿನ ಮ್ಯಾನೇಜರ್ ಪೆಪ್ ಗಾರ್ಡಿಯೋಲಾ, “ಸ್ವತಂತ್ರ ಸಮಿತಿಯ ನಿರ್ಧಾರಕ್ಕಾಗಿ ಕಾಯಿರಿ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಂಬುತ್ತೇವೆ” ಎಂದಿದ್ದರು.
ಕ್ಲಬ್ ನ ಪ್ರಶಸ್ತಿ ಭರಿತ ಅವಧಿಗೆ ಗಾರ್ಡಿಯೋಲಾ ಪ್ರಮುಖ ಕಾರಣರಾಗಿದ್ದರು. 2023ರಲ್ಲಿ ಒಂದೇ ಋತುವಿನಲ್ಲಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ‘ಟ್ರಬಲ್’ ಸಾಧನೆ ಹಾಗೂ 2024ರಲ್ಲಿ ಸತತ ನಾಲ್ಕನೇ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆಲುವಿಗೆ ಅವರು ತಂಡವನ್ನು ಮುನ್ನಡೆಸಿದ್ದರು. ಕಳೆದ ಋತುವಿನ ಅಂತ್ಯದಲ್ಲಿ ಅವರು ಕ್ಲಬ್ ತೊರೆದಿದ್ದಾರೆ.
‘ಫುಟ್ಬಾಲ್ ಲೀಕ್ಸ್’ ದಾಖಲೆಗಳ ಕುರಿತು ಸಿಟಿ, “ಸಂದರ್ಭದಿಂದ ಹೊರಗಿರುವ ವಿಷಯಗಳ ಕುರಿತು ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕ್ಲಬ್ ನ ಘನತೆಗೆ ಧಕ್ಕೆ ತರುವ ಪ್ರಯತ್ನವು ವ್ಯವಸ್ಥಿತವಾಗಿದ್ದು, ಅದು ಸ್ಪಷ್ಟವಾಗಿದೆ” ಎಂದು ಹೇಳಿತ್ತು.
ಪ್ರಕರಣದಲ್ಲಿ 114 ಆರೋಪಗಳು ಸಾಬೀತಾಗಿದ್ದರೂ, ಶಿಕ್ಷೆ ಇನ್ನೂ ಪ್ರಕಟವಾಗಿಲ್ಲ. ಮುಂದಿನ ಕಾನೂನು ಪ್ರಕ್ರಿಯೆ ಮತ್ತು ಸಿಟಿಯ ಮೇಲ್ಮನವಿಯ ಬಳಿಕ ಪ್ರಕರಣದ ಅಂತಿಮ ಪರಿಣಾಮ ಸ್ಪಷ್ಟವಾಗಲಿದೆ.
ಸೌಜನ್ಯ: telegraph.co.uk