ಏಕದಿನ ಕ್ರಿಕೆಟ್ | 50 ಅರ್ಧಶತಕ ಗಳಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಜೋ ರೂಟ್
Photo Credit : PTI
ಅಡಿಲೇಡ್: ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ತನ್ನ ಯಶಸ್ವಿ ಏಕದಿನ ವೃತ್ತಿಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. 50 ಓವರ್‌ಗಳ ಪಂದ್ಯದಲ್ಲಿ 50 ಅರ್ಧಶತಕಗಳನ್ನು ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು.
ರವಿವಾರ ಆಸ್ಟ್ರೇಲಿಯದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಜೋ ರೂಟ್ ಈ ಸಾಧನೆ ಮಾಡಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರೂಟ್ 68 ಎಸೆತಗಳಲ್ಲಿ 62 ರನ್ ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ಅಡಿಲೇಡ್ ಓವಲ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 355 ರನ್ ಗಳಿಸಲು ನೆರವಾದರು. ರೂಟ್ 22ನೇ ಓವರ್‌ನಲ್ಲಿ 50 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು. ಏಕದಿನ ಕ್ರಿಕೆಟ್‌ನಲ್ಲಿ ಈ ತನಕ ಯಾವ ಇಂಗ್ಲೆಂಡ್ ಬ್ಯಾಟರ್ ಮಾಡದ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಗರಿಷ್ಠ ರನ್ ಸ್ಕೋರರ್ ಆಗಿರುವ ರೂಟ್ ಇದೀಗ 201 ಪಂದ್ಯಗಳಲ್ಲಿ 50 ಅರ್ಧಶತಕ ಹಾಗೂ 20 ಶತಕಗಳನ್ನು ಗಳಿಸಿದ್ದಾರೆ. 35ರ ವಯಸ್ಸಿನ ರೂಟ್ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮೊರ್ಗನ್‌ಗಿಂತ ಮುಂದಿದ್ದಾರೆ. ಮೊರ್ಗನ್ 225 ಪಂದ್ಯಗಳಿಂದ 42 ಅರ್ಧಶತಕಗಳನ್ನು ಗಳಿಸಿದ್ದಾರೆ. ಇಯಾನ್ ಬೆಲ್(35)ಹಾಗೂ ಜೋಸ್ ಬಟ್ಲರ್(30)ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಹೊಸ ಸಾಧನೆಯ ಮೂಲಕ ರೂಟ್ ಅವರು ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಇಲೈಟ್ ಗುಂಪಿನಲ್ಲಿ ಸ್ಥಾನ ಪಡೆದರು. ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡುಲ್ಕರ್ 1989 ಹಾಗೂ 2012ರ ನಡುವೆ 463 ಪಂದ್ಯಗಳಲ್ಲಿ 49 ಶತಕಗಳ ಜೊತೆಗೆ ಒಟ್ಟು 96 ಅರ್ಧಶತಕಗಳನ್ನು ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ(93 ಅರ್ಧಶತಕ)ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಜಾಕಸ್ ಕಾಲಿಸ್(86)ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಪಾಕಿಸ್ತಾನದ ಇನ್‌ಝಿಮಾಮುಲ್ ಹಕ್ ತಲಾ 83 ಅರ್ಧಶತಕಗಳನ್ನು ಗಳಿಸಿದ್ದಾರೆ.