600ನೇ ಟೆಸ್ಟ್ ಪಂದ್ಯವನ್ನಾಡಿದ ಮೂರನೇ ತಂಡ ಭಾರತ
Photo Credit : PTI
ಗಾಲೆ, ಆ.15: ಲಾರ್ಡ್ಸ್ ಕ್ರೀಡಾಂಗಣದಲ್ಲಿ 1932ರ ಜೂನ್ 25ರಂದು ಕರ್ನಲ್ ಕೊಟ್ಟಾರಿ ಕನಕಯ್ಯ ನಾಯುಡು(ಸಿಕೆ ನಾಯುಡು)ನೇತೃತ್ವದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ 94 ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡವು ಶನಿವಾರ ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ತನ್ನ 600ನೇ ಪಂದ್ಯವನ್ನಾಡಿದೆ.
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ನಂತರ ಈ ಮೈಲಿಗಲ್ಲು ತಲುಪಿದ ಮೂರನೇ ತಂಡ ಎನಿಸಿಕೊಂಡಿದೆ. ಭಾರತವು ತನ್ನ 80ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಸಾಧನೆ ಮಾಡಿದೆ.
ಈ ತನಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 319 ಅದೃಷ್ಟಶಾಲಿ ಆಟಗಾರರು ಭಾರತದ ಕ್ಯಾಪ್ ಧರಿಸಿದ್ದಾರೆ. ಮಾನವ್ ಸುಥರ್ ಹೊಸ ಆಟಗಾರನಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅತಿ ಹೆಚ್ಚು ಪಂದ್ಯಗಳನ್ನು(200) ಆಡಿದ್ದಾರೆ.
ಕರ್ನಲ್ ಸಿ.ಕೆ. ನಾಯುಡು ಅವರಿಂದ ರಿಷಭ್ ಪಂತ್ ತನಕ 94 ವರ್ಷಗಳಲ್ಲಿ 38 ನಾಯಕರು ಭಾರತೀಯ ಪುರುಷರ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು. ವಿರಾಟ್ ಕೊಹ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಭಾರತದ ನಾಯಕತ್ವವಹಿಸಿ ದಾಖಲೆ ನಿರ್ಮಿಸಿದ್ದಾರೆ. 2014ರಿಂದ 2022ರ ತನಕ 68 ಟೆಸ್ಟ್‌ಗಳಲ್ಲಿ ನಾಯಕತ್ವವಹಿಸಿದ್ದ ಕೊಹ್ಲಿ 40ರಲ್ಲಿ ಜಯ ಗಳಿಸಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿದ್ದಾರೆ.
ಭಾರತದ ಮೊದಲ, 100ನೇ, 200ನೇ, 300ನೇ, 400ನೇ ಹಾಗೂ 500ನೇ ಪಂದ್ಯದಲ್ಲಿನ ಫಲಿತಾಂಶದತ್ತ ಕಿರು ನೋಟ ಇಲ್ಲಿದೆ..
ಭಾರತದ ಮೊದಲ ಟೆಸ್ಟ್: ಇಂಗ್ಲೆಂಡ್-ಭಾರತ, ಲಾರ್ಡ್ಸ್, ಜೂನ್ 25-28,1932
ಸಿ.ಕೆ .ನಾಯುಡು ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದೆ. ಜಾರ್ಡಿನ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ ಭಾರತವು 158 ರನ್‌ಗಳಿಂದ ಸೋಲುಂಡಿತ್ತು.
ಭಾರತದ 100ನೇ ಟೆಸ್ಟ್: ಭಾರತ-ಇಂಗ್ಲೆಂಡ್, ಬರ್ಮಿಂಗ್‌ಹ್ಯಾಮ್, ಜುಲೈ 13-15, 1967
ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದ ಭಾರತ ತಂಡವು 100ನೇ ಪಂದ್ಯವನ್ನು 132 ರನ್‌ಗಳಿಂದ ಸೋತಿತ್ತು.
ಭಾರತದ 200ನೇ ಟೆಸ್ಟ್ ಪಂದ್ಯ: ಭಾರತ-ಪಾಕಿಸ್ತಾನ, ಲಾಹೋರ್, ಡಿ.10-15, 1982
ಮೊಹಿಂದರ್ ಅಮರ್‌ನಾಥ್ ನಾಯಕತ್ವದ ಭಾರತ ತಂಡ ಪಾಕಿಸ್ತಾನದ ವಿರುದ್ದ ಡ್ರಾ ಸಾಧಿಸಿತು.
*ಭಾರತದ 300ನೇ ಟೆಸ್ಟ್ ಪಂದ್ಯ: ಭಾರತ-ದಕ್ಷಿಣ ಆಫ್ರಿಕಾ, ಅಹ್ಮದಾಬಾದ್, ನ.20-23, 1996
ಸಚಿನ್ ತೆಂಡುಲ್ಕರ್ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 65 ರನ್‌ಗಳಿಂದ ಜಯ ಸಾಧಿಸಿತ್ತು.
ಭಾರತದ 400ನೇ ಟೆಸ್ಟ್ ಪಂದ್ಯ: ವೆಸ್ಟ್‌ಇಂಡೀಸ್-ಭಾರತ, ಜಮೈಕಾ, ಜೂನ್ 30, ಜು.2, 2006
ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡವು ತನ್ನ 400ನೇ ಟೆಸ್ಟ್ ಪಂದ್ಯವನ್ನು 49 ರನ್‌ಗಳಿಂದ ಗೆದ್ದುಕೊಂಡಿದೆ.
ಭಾರತದ 500ನೇ ಟೆಸ್ಟ್ ಪಂದ್ಯ: ಭಾರತ-ನ್ಯೂಝಿಲ್ಯಾಂಡ್, ಗ್ರೀನ್‌ಪಾರ್ಕ್, ಕಾನ್ಪುರ, ಸೆ.22-26, 2016
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಾನ್ಪುರದ ಗ್ರೀನ್‌ಪಾರ್ಕ್‌ನಲ್ಲಿ ಭಾರತ ತಂಡವು 500ನೇ ಟೆಸ್ಟ್ ಪಂದ್ಯವನ್ನಾಡಿತು. ಭಾರತವು197 ರನ್‌ಗಳಿಂದ ಜಯ ಸಾಧಿಸಿತ್ತು.