30 ಸ್ಥಳಗಳಲ್ಲಿ 30 ಟೆಸ್ಟ್ ಪಂದ್ಯಗಳು | ಸಚಿನ್ ತೆಂಡುಲ್ಕರ್ ಹೆಜ್ಜೆ ಅನುಸರಿಸಿದ ಯಶಸ್ವಿ ಜೈಸ್ವಾಲ್

Update: 2026-08-15 20:19 IST

ಯಶಸ್ವಿ ಜೈಸ್ವಾಲ್ |Photo Credit : PTI 

ಹೊಸದಿಲ್ಲಿ, ಆ.15: ಶ್ರೀಲಂಕಾದ ವಿರುದ್ಧ ಗಾಲೆಯಲ್ಲಿ ಶನಿವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತನ್ನ ವೃತ್ತಿಜೀವನದ 30ನೇ ಟೆಸ್ಟ್ ಪಂದ್ಯವನ್ನಾಡಿದರು. ಜೈಸ್ವಾಲ್ ತನ್ನ ಮೊದಲ 30 ಟೆಸ್ಟ್ ಪಂದ್ಯಗಳನ್ನು ವಿವಿಧ 30 ಸ್ಥಳಗಳಲ್ಲಿ ಆಡುವ ಮೂಲಕ ಅಪರೂಪದ ಸಾಧನೆಗೈದು ಸಚಿನ್ ತೆಂಡುಲ್ಕರ್ ಹೆಜ್ಜೆಯನ್ನು ಅನುಸರಿಸಿದರು.

ಭಾರತದ ಆರಂಭಿಕ ಆಟಗಾರ ಜೈಸ್ವಾಲ್ ಒಂದೇ ಮೈದಾನದಲ್ಲಿ ಎರಡು ಬಾರಿ ಟೆಸ್ಟ್ ಪಂದ್ಯವನ್ನಾಡಿಲ್ಲ.

ಜುಲೈ 2023ರಲ್ಲಿ ಡೊಮಿನಿಕಾದಲ್ಲಿ ತನ್ನ ಪಯಣವನ್ನು ಆರಂಭಿಸಿದ ಜೈಸ್ವಾಲ್ ಅವರು ಕೆರಿಬಿಯನ್, ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದಲ್ಲಿ ಆಡಿದ್ದರು. ಶನಿವಾರ ಗಾಲೆಯಲ್ಲಿ ತನ್ನ 30ನೇ ಟೆಸ್ಟ್ ಪಂದ್ಯವನ್ನಾಡಿದರು.

ಜೈಸ್ವಾಲ್ ತನ್ನ ಟೆಸ್ಟ್ ವೃತ್ತಿಬದುಕಿನಲ್ಲಿ ಅತ್ಯುತ್ತಮ ಆರಂಭ ಪಡೆದಿದ್ದು, 30 ಪಂದ್ಯಗಳಲ್ಲಿ 55 ಇನಿಂಗ್ಸ್‌ಗಳಲ್ಲಿ ಏಳು ಶತಕ ಹಾಗೂ 13 ಅರ್ಧಶತಕಗಳ ಸಹಿತ 2,567 ರನ್ ಗಳಿಸಿದ್ದಾರೆ. ಔಟಾಗದೆ 214 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ವಿಶಿಷ್ಟ ದಾಖಲೆ ನಿರ್ಮಿಸಿರುವ ಜೈಸ್ವಾಲ್ ಭಾರತದ ಇಬ್ಬರು ಮಾಜಿ ಬ್ಯಾಟರ್‌ಗಳೊಂದಿಗೆ ಸೇರಿಕೊಂಡರು. ಸಂಜಯ್ ಮಾಂಜ್ರೇಕರ್ ತನ್ನ ಮೊದಲ 33 ಟೆಸ್ಟ್ ಪಂದ್ಯಗಳನ್ನು ವಿವಿಧ 33 ಸ್ಥಳಗಳಲ್ಲಿ ಆಡಿದ್ದರು. ಸಚಿನ್ ತೆಂಡುಲ್ಕರ್ ತನ್ನ ಮೊದಲ 32 ಟೆಸ್ಟ್ ಪಂದ್ಯಗಳನ್ನು 32 ಸ್ಥಳಗಳಲ್ಲಿ ಆಡಿದ್ದಾರೆ.

ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ರನೌಟಾದರು. 2024ರಲ್ಲಿ ಆಸ್ಟ್ರೇಲಿಯದ ವಿರುದ್ಧ ಮೊದಲ ಬಾರಿ 82 ರನ್ ಗಳಿಸಿ ರನೌಟಾಗಿದ್ದರು. ವೆಸ್ಟ್‌ಇಂಡೀಸ್ ವಿರುದ್ಧ್ದ 175 ರನ್ ಗಳಿಸಿದ್ದಾಗ, ಇದೀಗ ತನ್ನ 30ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಮತ್ತೊಮ್ಮೆ 32 ರನ್‌ಗೆ ರನೌಟಾದರು.

ಚೊಚ್ಚಲ ಟೆಸ್ಟ್ ಶತಕ ಗಳಿಸಿದ ದೇವದತ್ತ ಪಡಿಕ್ಕಲ್

ಶ್ರೀಲಂಕಾ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ವೇಳೆ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ ದೇವದತ್ತ ಪಡಿಕ್ಕಲ್ ತನ್ನದೇ ಶೈಲಿಯಲ್ಲಿ ಭಾರತದ ಟೆಸ್ಟ್ ಕ್ರಿಕೆಟಿಗೆ ವಾಪಸಾದರು.

ಕರ್ನಾಟಕದ ಎಡಗೈ ಬ್ಯಾಟರ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸಿದ್ದರು. ಶನಿವಾರ ಮೂರನೇ ಕ್ರಮಾಂಕದಲ್ಲಿ ಆಡಿದ ಪಡಿಕ್ಕಲ್ ಔಟಾಗದೆ 131 ರನ್ ಗಳಿಸಿ ಮಿಂಚಿದ್ದಾರೆ.

ಗಣ್ಯರ ಪಟ್ಟಿಗೆ ಪಡಿಕ್ಕಲ್: ಮಾಜಿ ನಾಯಕ ಸೌರವ್ ಗಂಗುಲಿ ನಂತರ ಪಡಿಕ್ಕಲ್ ಅವರು 21ನೇ ಶತಮಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಶತಕ ಗಳಿಸಿದ ಭಾರತದ ಎರಡನೇ ಎಡಗೈ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗಂಗುಲಿ 2002ರಲ್ಲಿ ಹೊಸದಿಲ್ಲಿಯಲ್ಲಿ ಝಿಂಬಾಬ್ವೆ ವಿರುದ್ಧ 136 ರನ್ ಗಳಿಸಿದ್ದರು.

ಒಟ್ಟಾರೆ ಪಡಿಕ್ಕಲ್ ಅವರು ಮೂರನೇ ಕ್ರಮಾಂಕದಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಆರನೇ ಎಡಗೈ ಬ್ಯಾಟರ್ ಆಗಿದ್ದಾರೆ. ನಾಲ್ಕು ಶತಕಗಳನ್ನು ಸಿಡಿಸಿರುವ ವಿನೋದ್ ಕಾಂಬ್ಳಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆ ಬಳಿಕ ಗಂಗುಲಿ(3 ಶತಕ), ಸಲಿಮ್ ದುರಾನಿ, ಬಾಪು ನಾಡಕರ್ಣಿ, ಅಜಿತ್ ವಾಡೇಕರ್, ಏಕನಾಥ ಸೋಲ್ಕರ್, ಸುರಿಂದರ್ ಅಮರನಾಥ್ ಹಾಗೂ ಇದೀಗ ಪಡಿಕ್ಕಲ್ ತಲಾ ಒಂದು ಶತಕ ಗಳಿಸಿದ್ದಾರೆ.

ಪಡಿಕ್ಕಲ್ ದೀರ್ಘ ಸಮಯದ ನಂತರ 3ನೇ ಕ್ರಮಾಂಕದಲ್ಲಿ ಶತಕ ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು. 2024ರಲ್ಲಿ ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಶತಕದ ಸಾಧನೆ ಮಾಡಿದ್ದರು. ಆ ನಂತರ ಭಾರತವು 19 ಟೆಸ್ಟ್ ಪಂದ್ಯಗಳಲ್ಲಿ ಏಳು ವಿವಿಧ ಬ್ಯಾಟರ್‌ಗಳನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದೆ. 35 ಇನಿಂಗ್ಸ್‌ಗಳಲ್ಲಿ ಕೇವಲ ಐದು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ದಾಖಲಾಗಿದೆ.

25ರ ವಯಸ್ಸಿನ ಪಡಿಕ್ಕಲ್ 2025-26ರ ರಣಜಿ ಟ್ರೋಫಿ ಋತುವಿನಲ್ಲಿ 60.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು, ಗಾಲೆಯಲ್ಲಿ ಇದೇ ಆತ್ಮವಿಶ್ವಾಸದೊಂದಿಗೆ ಆಡಿದ್ದಾರೆ. ಪಡಿಕ್ಕಲ್ ತನ್ನ ಶತಕ ತಲುಪಿದ ನಂತರ ಗಾಳಿಗೆ ಗುದ್ದಿ, ತನ್ನ ಹೆಲ್ಮೆಟ್‌ನ್ನು ತೆಗೆದರು. ಪ್ರೇಕ್ಷಕರು ಹಾಗೂ ತನ್ನ ಸಹ ಆಟಗಾರರತ್ತ ತನ್ನ ಬ್ಯಾಟನ್ನು ತೋರಿಸಿದರು.

ಕ್ರೀಸ್‌ನಲ್ಲಿದ್ದ ಭಾರತದ ನಾಯಕ ಶುಭಮನ್ ಗಿಲ್, ಪಡಿಕ್ಕಲ್‌ಗೆ ಅಭಿನಂದಿಸಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಮ್‌ನಿಂದ ಶ್ಲಾಘನೆ ವ್ಯಕ್ತಪಡಿಸಿದರು. ಸ್ಟೇಡಿಯಂನಲ್ಲಿದ್ದ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಂಭ್ರಮದಲ್ಲಿ ಭಾಗಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News