ಮೊದಲ ಟೆಸ್ಟ್ | ಪಡಿಕ್ಕಲ್ ಆಕರ್ಷಕ ಶತಕ, ರಾಹುಲ್ ಅರ್ಧಶತಕ : ಶ್ರೀಲಂಕಾ ವಿರುದ್ಧ ಭಾರತಕ್ಕೆ 288/2

Update: 2026-08-15 20:22 IST

 ಕೆ.ಎಲ್.ರಾಹುಲ್ | Photo Credit : PTI 

ಗಾಲೆ, ಆ.15: ದೇವದತ್ತ ಪಡಿಕ್ಕಲ್ ಆಕರ್ಷಕ ಶತಕ(ಔಟಾಗದೆ 131 ರನ್, 178 ಎಸೆತ,12 ಬೌಂಡರಿ,1 ಸಿಕ್ಸರ್)ಹಾಗೂ ಕೆ.ಎಲ್.ರಾಹುಲ್ ಅರ್ಧಶತಕದ(77 ರನ್, 162 ಎಸೆತ, 9 ಬೌಂಡರಿ,1 ಸಿಕ್ಸರ್)ಕೊಡುಗೆಯ ನೆರವಿನಿಂದ ಟೀಮ್ ಇಂಡಿಯಾವು ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಪ್ರಾಬಲ್ಯ ಸಾಧಿಸಿದೆ.

ಶನಿವಾರ ಟಾಸ್ ಜಯಿಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ತನ್ನ 600ನೇ ಟೆಸ್ಟ್ ಪಂದ್ಯವನ್ನಾಡಿದ ಭಾರತವು ಮೊದಲ ದಿನದಾಟದಂತ್ಯಕ್ಕೆ 73 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 288 ರನ್ ಗಳಿಸಿದೆ. ಎರಡು ಬಾರಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ ಕಾರಣ ದಿನದಾಟದಲ್ಲಿ 73 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಯಿತು.

ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್(32 ರನ್)ಹಾಗೂ ಕೆ.ಎಲ್.ರಾಹುಲ್ ಮೊದಲ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿ ಸಾಧಾರಣ ಆರಂಭ ಒದಗಿಸಿದರು. ಆದರೆ ದೊಡ್ಡ ಮೊತ್ತದತ್ತ ಕಣ್ಣಿಟ್ಟಿದ್ದ ಜೈಸ್ವಾಲ್ 32 ರನ್ ಗಳಿಸಿದ್ದಾಗ ರನೌಟಾದರು.

ಆಗ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ಎರಡನೇ ವಿಕೆಟ್‌ಗೆ 150 ರನ್ ಸೇರಿಸಿ ತಂಡವನ್ನು ಆಧರಿಸಿದರು. ರಾಹುಲ್ ಔಟಾಗದೆ 77 ರನ್ ಗಳಿಸಿದ್ದಾಗ ತೋಳಿನಲ್ಲಿ ಸೆಳೆತ ಕಾಣಿಸಿಕೊಂಡು ಗಾಯಗೊಂಡು ನಿವೃತ್ತಿಯಾದರು.

ನಾಯಕ ಶುಭಮನ್ ಗಿಲ್(16 ರನ್)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದಿನದಾಟದಂತ್ಯಕ್ಕೆ ರಿಷಭ್ ಪಂತ್(ಔಟಾಗದೆ 27, 36 ಎಸೆತ)ಹಾಗೂ ಪಡಿಕ್ಕಲ್(131 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಳೆ ಹಾಗೂ ಮಂದ ಬೆಳಕಿನಿಂದಾಗಿ ದಿನದಾಟವು ಬೇಗನೆ ಕೊನೆಗೊಂಡಿತು.

ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಅಪೂರ್ವ ಅವಕಾಶ ಪಡೆದ ಪಡಿಕ್ಕಲ್ ಔಟಾಗದೆ 131 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಭಾರತ ಎದುರಿಸುತ್ತಿದ್ದ ಶತಕದ ಬರವನ್ನು ನೀಗಿಸಿದರು. 2024ರಲ್ಲಿ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ್ದ ಕೊನೆಯ ಬ್ಯಾಟರ್ ಆಗಿದ್ದಾರೆ.

ಕೆ.ಎಲ್.ರಾಹುಲ್ ಗಾಯಾಗೊಂಡು ನಿವೃತ್ತಿ

ಭಾರತದ ಆರಂಭಿಕ ಬ್ಯಾಟರ್ ರಾಹುಲ್ ಮೊದಲ ಟೆಸ್ಟ್‌ನ ಮೊದಲ ದಿನದಾಟದ ಮೂರನೇ ಸೆಶನ್‌ನಲ್ಲಿ 77 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಯಾದರು.

162 ಎಸೆತಗಳಲ್ಲಿ ಔಟಾಗದೆ 77 ರನ್ ಗಳಿಸಿದ್ದ ರಾಹುಲ್ ಟೀ ವಿರಾಮದ ನಂತರ ಬ್ಯಾಟಿಂಗ್ ಮುಂದುವರಿಸಲು ಯತ್ನಿಸಿದರು. ಆದರೆ, ಅನಿವಾರ್ಯವಾಗಿ ಮೈದಾನ ತೊರೆದರು. ಇದಕ್ಕೂ ಮೊದಲು ಕರ್ನಾಟಕದ ಸಹ ಆಟಗಾರ ದೇವದತ ಪಡಿಕ್ಕಲ್ ಅವರೊಂದಿಗೆ 255 ಎಸೆತಗಳಲ್ಲಿ 150 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

34ರ ಹರೆಯದ ರಾಹುಲ್‌ಗೆ ಟೀ ವಿರಾಮದ ವೇಳೆಗೆ ಸೆಳೆತ ಕಾಣಿಸಿಕೊಂಡಿತು. ವಿರಾಮದ ನಂತರ ಪಡಿಕ್ಕಲ್ ಜೊತೆ ತಡವಾಗಿ ಮೈದಾನಕ್ಕೆ ಇಳಿದ ರಾಹುಲ್ ಹೆಚ್ಚಿನ ಆರೈಕೆಗೆ ಫಿಸಿಯೊರನ್ನು ಕರೆದರು. ಅಂತಿಮವಾಗಿ ಮೈದಾನವನ್ನು ತೊರೆದರು. ರಾಹುಲ್ ಮೆಟ್ಟಿಲುಗಳನ್ನು ಹತ್ತಲು ಕಷ್ಟಪಡುತ್ತಿರುವುದು ಕಂಡುಬಂದಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News