ಬಜರಂಗ್ ಪುನಿಯಾರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ

Update: 2024-05-09 16:57 GMT

Photo : PTI

ಹೊಸದಿಲ್ಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ದಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ವಿಶ್ವ ಕುಸ್ತಿ ಒಕ್ಕೂಟ(ಯುಡಬ್ಲ್ಯುಡಬ್ಲ್ಯು)ಈ ವರ್ಷಾಂತ್ಯದ ತನಕ ಬಜರಂಗ್ ಪುನಿಯಾರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ನಾಡಾ ತೀರ್ಪಿನ ಬಗ್ಗೆ ತಿಳಿದಿದ್ದರೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಪುನಿಯಾ ಅವರ ಸಾಗರೋತ್ತರ ತರಬೇತಿಗಾಗಿ ಸುಮಾರು 9 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿತು.

ಸಾಯ್ ನಿರ್ಧಾರ ನನಗೂ ಆಶ್ಚರ್ಯ ತಂದಿದೆ. ನಾನು ರಶ್ಯಕ್ಕೆ ತೆರಳುವ ಯೋಜನೆಯನ್ನು ರದ್ದುಗೊಳಿಸಿದ್ಧೇನೆ. ನಾನು ಈಗ ತರಬೇತಿಗಾಗಿ ಎಲ್ಲಿಗೂ ಹೋಗುತ್ತಿಲ್ಲ. ನನ್ನ ವಕೀಲರು ನಾಡಾಗೆ ಉತ್ತರವನ್ನು ಸಲ್ಲಿಸಿದ್ದಾರೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

ರಾಷ್ಟ್ರದ ಅತ್ಯಂತ ಖ್ಯಾತ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಅವರು ಎಪ್ರಿಲ್ 18ರಂದು ನೋಟಿಸ್ ಸ್ವೀಕರಿಸಿದ್ದರು. ಆನಂತರ ಎಪ್ರಿಲ್ 20ರಂದು ನಾಡಾದಿಂದ ಅಮಾನತುಗೊಂಡಿದ್ದರು.

ಡೋಪಿಂಗ್ ಪರೀಕ್ಷೆಗೆ ತನ್ನ ಮೂತ್ರ ಮಾದರಿಯನ್ನು ಒದಗಿಸಲು ನಾನು ಯಾವತ್ತೂ ಆಕ್ಷೇಪ ವ್ಯಕ್ತಪಡಿಸಿಲ್ಲ. ತನ್ನ ಸ್ಯಾಂಪಲ್ ಸಂಗ್ರಹಿಸಲು ಅವಧಿ ಮೀರಿದ ಕಿಟ್‌ ಗಳನ್ನು ಏಕೆ ತಂದಿದ್ದೀರಿ ಎಂದು ಸ್ಪಷ್ಟಪಡಿಸುವಂತೆ ಡೋಪಿಂಗ್ ನಿಯಂತ್ರಣ ಅಧಿಕಾರಿಯನ್ನು ಕೋರಿದ್ದೆ ಎಂದು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಬಜರಂಗ್ ಹೇಳಿದ್ದಾರೆ.

ತನ್ನ ಅಮಾನತಿನ ಕುರಿತಾಗಿ ವಿಶ್ವ ಕುಸ್ತಿ ಒಕ್ಕೂಟದಿಂದ ಯಾವುದೇ ಮಾಹಿತಿ ಪಡೆದಿಲ್ಲ ಎಂದು ಪಿಟಿಐಗೆ ಬಜರಂಗ್ ತಿಳಿಸಿದ್ದಾರೆ.

ಡೋಪಿಂಗ್ ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ನಾಡಾವು ಬಜರಂಗ್ ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ನಾವು ಈ ಕಾರಣಕ್ಕೆ ಡಿಸೆಂಬರ್ 31ರ ತನಕ ಬಜರಂಗ್ರನ್ನು ಅಮಾನತುಗೊಳಿಸಿದ್ದೇವೆ ಎಂದು ವಿಶ್ವ ಕುಸ್ತಿ ಫೆಡರೇಶನ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News