ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಅರ್ಧಶತಕ | ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿ ಜಯಭೇರಿ

Update: 2024-04-25 18:10 GMT

PC : X/@IPL

·

ಹೈದರಾಬಾದ್ : ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ(51 ರನ್, 43 ಎಸೆತ, 4 ಬೌಂಡರಿ,1 ಸಿಕ್ಸರ್) ಹಾಗೂ ರಜತ್ ಪಾಟಿದಾರ್(50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್)ಅರ್ಧಶತಕಗಳ ಕೊಡುಗೆ, ಕರ್ಣ್ ಶರ್ಮಾ(2-20) ನೇತೃತ್ವದ ಬೌಲರ್‌ಗಳ ಕರಾರುವಾಕ್ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್‌ನ 41ನೇ ಪಂದ್ಯದಲ್ಲಿ 35 ರನ್ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಆಡಿರುವ 9ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿದೆ.

ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ನಾಯಕ ಎಫ್‌ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ 206 ರನ್ ಗಳಿಸಲು ಶಕ್ತವಾಯಿತು.

ಗೆಲ್ಲಲು 207 ರನ್ ಗುರಿ ಪಡೆದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದೆ.

ಸನ್‌ರೈಸರ್ಸ್ ಪರ ಆಲ್‌ರೌಂಡರ್ ಶಹಬಾಝ್ ಅಹ್ಮದ್(ಔಟಾಗದೆ 40, 37 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(31 ರನ್, 13 ಎಸೆತ) ಹಾಗೂ ನಾಯಕ ಪ್ಯಾಟ್ ಕಮಿನ್ಸ್(31 ರನ್, 15 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

ಟ್ರಾವಿಸ್ ಹೆಡ್(1), ಮರ್ಕ್ರಮ್(7 ರನ್), ಹೆನ್ರಿಕ್ ಕ್ಲಾಸೆನ್(7 ರನ್) ಅಲ್ಪ ಮೊತ್ತಕ್ಕೆ ಔಟಾದರು.

ಆರ್‌ಸಿಬಿ ಪರ ಕರ್ಣ್ ಶರ್ಮಾ(2-29), , ಕ್ಯಾಮರೂನ್ ಗ್ರೀನ್ (2-12) ಹಾಗೂ ಸ್ವಪ್ನಿಲ್ ಸಿಂಗ್(2-40) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು 3.5 ಓವರ್‌ಗಳಲ್ಲಿ 48 ರನ್ ಸೇರಿಸಿದ ಕೊಹ್ಲಿ ಹಾಗೂ ಪ್ಲೆಸಿಸ್(25 ರನ್, 12 ಎಸೆತ)ಆರ್‌ಸಿಬಿಗೆ ಉತ್ತಮ ಆರಂಭ ಒದಗಿಸಿದರು. ಆರ್‌ಸಿಬಿ ಪವರ್ ಪ್ಲೇ ವೇಳೆ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತು. ಪ್ಲೆಸಿಸ್ ಹಾಗೂ ವಿಲ್ ಜಾಕ್ಸ್(6 ರನ್)ಬೆನ್ನುಬೆನ್ನಿಗೆ ಔಟಾದರು. ಆಗ 3ನೇ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ಪಾಟಿದಾರ್ ತಂಡವನ್ನು ಆಧರಿಸಿದರು. ಪಾಟಿದಾರ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅಬ್ಬರಿಸಿದರು. ಪಾಟಿದಾರ್ ಹಾಗೂ ಕೊಹ್ಲಿ ಅರ್ಧಶತಕ ಗಳಿಸಿದ ಬೆನ್ನಿಗೇ ಔಟಾದರು. ಮಹಿಪಾಲ್ ಲಾಮ್ರೊರ್(7)ಬೇಗನೆ ವಿಕೆಟ್ ಕೈಚೆಲ್ಲಿದರು.

ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್(ಔಟಾಗದೆ 37 ರನ್, 20 ಎಸೆತ, 5 ಬೌಂಡರಿ)ದಿನೇಶ್ ಕಾರ್ತಿಕ್ (11 ರನ್, 6 ಎಸೆತ)ರೊಂದಿಗೆ 6ನೇ ವಿಕೆಟ್‌ಗೆ 32 ರನ್ ಸೇರಿಸಿ ಆರ್‌ಸಿಬಿ ಸ್ಕೋರನ್ನು 200ರ ಗಡಿ ತಲುಪಿಸಿದರು. ಸ್ವಪ್ನಿಲ್ ಸಿಂಗ್ ಅವರು ನಟರಾಜನ್ ಎಸೆದ ಅಂತಿಮ ಓವರ್‌ನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಆರ್‌ಸಿಬಿ ಸ್ಕೋರನ್ನು 206ಕ್ಕೆ ತಲುಪಿಸಿದರು.

7 ಬೌಲರ್‌ಗಳನ್ನು ದಾಳಿಗಿಳಿಸಿದ ಹೈದರಾಬಾದ್ ಪರ ವೇಗಿ ಜಯದೇವ್ ಉನದ್ಕಟ್(3-30)ಯಶಸ್ವಿ ಪ್ರದರ್ಶನ ನೀಡಿದರು. ಟಿ.ನಟರಾಜನ್(2-39) ಎರಡು ವಿಕೆಟ್ ಪಡೆದರು.

ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಆಡಿರುವ ತಂಡವನ್ನು ಕಣಕ್ಕಿಳಿಸಿದೆ. ಹೈದರಾಬಾದ್ ತಂಡ ವಾಶಿಂಗ್ಟನ್ ಸುಂದರ್ ಬದಲಿಗೆ ಜಯದೇವ್ ಉನದ್ಕಟ್‌ಗೆ ಅವಕಾಶ ನೀಡಿದೆ.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 206/7

(ವಿರಾಟ್ ಕೊಹ್ಲಿ 51, ರಜತ್ ಪಾಟಿದಾರ್ 50, ಕ್ಯಾಮರೂನ್ ಗ್ರೀನ್ ಔಟಾಗದೆ 37, ಪ್ಲೆಸಿಸ್ 25, ಜಯದೇವ್ ಉನದ್ಕಟ್ 3-30, ನಟರಾಜನ್ 2-39)

ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 171/8

(ಶಹಬಾಝ್ ಅಹ್ಮದ್ ಔಟಾಗದೆ 40, ಅಭಿಷೇಕ್ ಶರ್ಮಾ 31, ಪ್ಯಾಟ್ ಕಮಿನ್ಸ್ 31, ಕ್ಯಾಮರೂನ್ ಗ್ರೀನ್ 2-12, ಕರ್ಣ್ ಶರ್ಮಾ 2-29, ಸ್ವಪ್ನಿಲ್ ಸಿಂಗ್ 2-40)

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News