400 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಮೊದಲ ಜೋಡಿ : ಇತಿಹಾಸ ನಿರ್ಮಿಸಿದ ರೋಹಿತ್, ವಿರಾಟ್ ಕೊಹ್ಲಿ

Update: 2026-07-19 19:59 IST

ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | Photo Credit : PTI

ಲಾರ್ಡ್ಸ್, ಜು.19: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರವಿವಾರ ತಮ್ಮ ಯಶಸ್ವಿ ವೃತ್ತಿಜೀವನಕ್ಕೆ ಮತ್ತೊಂದು ಸುವರ್ಣ ಅಧ್ಯಾಯ ಸೇರಿಸಿದ್ದು, ಒಟ್ಟಿಗೆ 400 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡದ ವಿರುದ್ಧ ರವಿವಾರ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನಾಡಲು ಇಬ್ಬರು ಹಿರಿಯ ಆಟಗಾರರು ಆಗಮಿಸಿದಾಗ ಈ ದಾಖಲೆ ನಿರ್ಮಾಣವಾಯಿತು.

ಇಬ್ಬರೂ ಆಟಗಾರರು ಟಿ-20 ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಆಧುನಿಕ ಯುಗದ ಇಬ್ಬರು ಶ್ರೇಷ್ಠ ಆಟಗಾರರು 2027ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರಶಸ್ತಿಯತ್ತ ಮುನ್ನಡೆಸುವ ಏಕೈಕ ಗುರಿ ಇಟ್ಟುಕೊಂಡಿದ್ದಾರೆ.

ಸೀಮಿತ ಓವರ್ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಓರ್ವ ಸ್ಫೋಟಕ ಶೈಲಿಯ ಆಟಗಾರನಾಗಿದ್ದರೆ, ಕೊಹ್ಲಿ ಅವರು ಈ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ.

ರೋಹಿತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 514 ಪಂದ್ಯಗಳನ್ನಾಡಿದ್ದು, 50 ಶತಕಗಳ ಸಹಿತ 20,289 ರನ್ ಗಳಿಸಿದ್ದಾರೆ. ಕೊಹ್ಲಿ 562 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 85 ಶತಕಗಳ ಸಹಿತ 28,285 ರನ್ ಗಳಿಸಿದ್ದಾರೆ.

ಈ ಇಬ್ಬರು ಆಟಗಾರರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 48,574 ರನ್ ಗಳಿಸಿದ್ದು, 135 ಶತಕಗಳನ್ನು ಗಳಿಸಿದ್ದಾರೆ. ದಶಕಗಳಿಂದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಯಶಸ್ಸಿಗೆ ಕಾರಣರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News