FIFA ವಿಶ್ವಕಪ್ ಫೈನಲ್ ನಲ್ಲಿ ದಾಖಲೆಗಳ ಮಹಾಪೂರ; ಸ್ಪೇನ್ ಗೆ ಐತಿಹಾಸಿಕ ಪ್ರಶಸ್ತಿ, ಮೆಸ್ಸಿ–ಎಂಬಾಪೆಗೂ ವಿಶೇಷ ಹೆಗ್ಗಳಿಕೆ
Photo Credit : fifa.com
ನ್ಯೂಜೆರ್ಸಿ : ಸ್ಪೇನ್ ತಂಡವು ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾವನ್ನು 1–0 ಗೋಲುಗಳಿಂದ ಮಣಿಸಿ, ಇತಿಹಾಸದಲ್ಲಿ ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 2026ರ ವಿಶ್ವಕಪ್ ಹಲವು ಅಪರೂಪದ ದಾಖಲೆಗಳು ಹಾಗೂ ವೈಯಕ್ತಿಕ ಸಾಧನೆಗಳಿಗೆ ಸಾಕ್ಷಿಯಾಯಿತು.
ಲಿಯೋನೆಲ್ ಮೆಸ್ಸಿ ಪಡೆ ನಡೆಸಿದ ಬಲವಾದ ರಕ್ಷಣಾತ್ಮಕ ಹೋರಾಟವನ್ನು ಮೆಟ್ಟಿ ನಿಂತ ಸ್ಪೇನ್ ತಂಡ, ಪಂದ್ಯದ 106 ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಗೋಲು ಮೂಲಕ ಗೆಲುವು ದಾಖಲಿಸಿತು.
ಹಲವು ದಾಖಲೆಗಳು-ಅಂಕಿಅಂಶಗಳು
ಸ್ಪೇನ್ ತನ್ನ ಎರಡನೇ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಒಂದಕ್ಕಿಂತ ಹೆಚ್ಚು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದ ಏಳನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ಸ್ಪೇನ್ ತಂಡವು ಯುರೋ ಚಾಂಪಿಯನ್ ಆಗಿದ್ದುಕೊಂಡೇ ಫೀಫಾ ವಿಶ್ವಕಪ್ ಗೆಲ್ಲುವ ಮೂಲಕ ಎರಡನೇ ಬಾರಿ ಈ ಸಾಧನೆಯನ್ನು ಮಾಡಿದೆ. 2010 ರಲ್ಲಿ ಈ ಸಾಧನೆ ಮಾಡಿದ್ದ ಸ್ಪೇನ್ ತಂಡವು ಇದೀಗ ತನ್ನ ಸಾಧನೆಯನ್ನು ಪುನರಾವರ್ತಿಸಿದೆ. 1972-74 ರಲ್ಲಿ ಪಶ್ಚಿಮ ಜರ್ಮನಿ ಈ ಅಪರೂಪದ ಸಾಧನೆಯನ್ನು ಮೊದಲು ಮಾಡಿತ್ತು.
ಟೊರೆಸ್ ಅವರ 106 ನೇ ನಿಮಿಷದ ಗೋಲು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಪಂದ್ಯ ಗೆಲ್ಲಿಸಿದ 3 ನೇ ಅತ್ಯಂತ ತಡವಾದ ಗೋಲಾಗಿದೆ. ಜೊತೆಗೆ ಬದಲಿ ಆಟಗಾರನಾಗಿ ಬಂದು ಗೋಲು ಬಾರಿಸಿ ಪಂದ್ಯ ಗೆಲ್ಲಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈ ಹಿಂದೆ ಬದಲಿ ಆಟಗಾರನಾಗಿ ಮಾರಿಯೋ ಗೊಟ್ಜೆ ಈ ಸಾಧನೆಯನ್ನು ಮಾಡಿದ್ದರು.
ಸ್ಪೇನ್ ಈ ವಿಶ್ವಕಪ್ನಲ್ಲಿ ಏಳು ಪಂದ್ಯಗಳಲ್ಲಿ ಎದುರಾಳಿಗಳಿಗೆ ಒಂದೂ ಗೋಲು ಗಳಿಸಲು ಬಿಟ್ಟುಕೊಡದೆ ತನ್ನ ಸಾರ್ವಕಾಲಿಕ ದಾಖಲೆಯನ್ನು ವಿಸ್ತರಿಸಿದೆ. ಇಡೀ ಪಂದ್ಯಾವಳಿಯಲ್ಲಿ ಸ್ಪೇನ್ ಬಿಟ್ಟುಕೊಟ್ಟಿದ್ದು ಕೇವಲ ಒಂದು ಗೋಲು ಮಾತ್ರ . ಇದು ವಿಶ್ವಕಪ್ ಚಾಂಪಿಯನ್ ತಂಡವೊಂದು ಬಿಟ್ಟುಕೊಟ್ಟ ಅತಿ ಕಡಿಮೆ ಗೋಲಾಗಿದೆ.
ಲೂಯಿಸ್ ಡಿ ಲಾ ಫ್ಯುಯೆಂಟ್ ವಿಶ್ವಕಪ್ ಗೆದ್ದ ಅತ್ಯಂತ ಹಿರಿಯ ವಯಸ್ಸಿನ ಮ್ಯಾನೇಜರ್/ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರ ವಯಸ್ಸು 65 ವರ್ಷ 29 ದಿನಗಳು.
ಸ್ಪೇನ್ ಈಗ ಎಲ್ಲಾ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 38 ಪಂದ್ಯಗಳಿಂದ ಸೋಲದೆ ಅಜೇಯವಾಗಿ ಮುನ್ನುಗ್ಗುತ್ತಿದೆ. ಪುರುಷರ ರಾಷ್ಟ್ರೀಯ ತಂಡವೊಂದರ ಸುದೀರ್ಘ ಅಜೇಯ ಸರಣಿಯ ಇಟಲಿಯ ಸಾರ್ವಕಾಲಿಕ ದಾಖಲೆಯನ್ನು ಮುರಿದಿದೆ. ಇಟಲಿ ತಂಡವು 2018-21ರಲ್ಲಿ ಈ ಸಾಧನೆ ಮಾಡಿತ್ತು.
39 ವರ್ಷದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಫೈನಲ್ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಅತ್ಯಂತ ಹಿರಿಯ ಔಟ್ಫೀಲ್ಡ್ ಆಟಗಾರ ಎನಿಸಿಕೊಂಡರು. ಜೊತೆಗೆ ಮೂರು ಫಿಫಾ ವಿಶ್ವಕಪ್ ಫೈನಲ್ಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಭಾಜನರಾದರು.
ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಸ್ಪೇನ್ ವಿರುದ್ಧ 11 ಗೋಲುಗಳನ್ನು ತಡೆಯುವ ಮೂಲಕ ಅತ್ಯಧಿಕ ಸೇವ್ಗಳನ್ನು ಮಾಡಿದ ಸಾಧನೆ ಮಾಡಿದರು. ಇದು ಕಳೆದ 60 ವರ್ಷಗಳ ವಿಶ್ವಕಪ್ ಫೈನಲ್ನಲ್ಲಿ ಪಂದ್ಯವೊಂದರಲ್ಲಿ ಗೋಲ್ಕೀಪರ್ ಮಾಡಿದ ಗರಿಷ್ಠ ಸೇವ್ ಆಗಿದೆ.
ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ವಿಶ್ವಕಪ್ ಗಳಲ್ಲಿಎರಡು ಬಾರಿ (2022 , 2026) 'ಗೋಲ್ಡನ್ ಬೂಟ್' ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನ್ನೊಂದೆಡೆ, ಫೈನಲ್ ಪಂದ್ಯವೊಂದರಲ್ಲಿ ಗುರಿಯತ್ತ ಒಂದೇ ಒಂದು ನೇರ ಶಾಟ್ (ಶೂಟ್ ಆನ್ ಟಾರ್ಗೆಟ್) ದಾಖಲಿಸದ ಏಕೈಕ ತಂಡ ಎಂಬ ಅನಪೇಕ್ಷಿತ ದಾಖಲೆಯೂ ಅರ್ಜೆಂಟೀನಾದ ಪಾಲಾಯಿತು. ಈ ಹಿಂದೆ 1990, 2014 ವಿಶ್ವಕಪ್ ಫೈನಲ್ ಗಳಲ್ಲೂ ಅರ್ಜೆಂಟೀನಾ ಈ ಅಪ್ರಿಯ ದಾಖಲೆಯನ್ನು ಮಾಡಿದೆ.