FIFA World Cup 2026 | 19ನೇ ವಯಸ್ಸಿನಲ್ಲೇ ವಿಶ್ವ ಫುಟ್‌ ಬಾಲ್‌ ನ ಶಿಖರಕ್ಕೇರಿದ ಸ್ಪೇನ್ ನ ಲ್ಯಾಮಿನ್ ಯಮಲ್

ವಿಶ್ವಕಪ್–ಯುರೋ ಗೆದ್ದ ಅತಿ ಕಿರಿಯ ಆಟಗಾರ; ಫೈನಲ್ ಬಳಿಕ ಮೆಸ್ಸಿಗೆ ಸಾಂತ್ವನ ಹೇಳಿದ ಸ್ಪೇನ್ ತಾರೆ

Update: 2026-07-20 11:00 IST

ಲ್ಯಾಮಿನ್ ಯಮಲ್ , ಲಿಯೋನೆಲ್ ಮೆಸ್ಸಿ | Photo Credit : bbc.com

ನ್ಯೂಯಾರ್ಕ್: ಫಿಫಾ ವಿಶ್ವಕಪ್ ಫೈನಲ್ ಅಂತ್ಯದಲ್ಲಿ ಕಣ್ಣೀರಿನಲ್ಲಿದ್ದ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯನ್ನು ಸ್ಪೇನ್‌ನ ಯುವ ತಾರೆ ಲ್ಯಾಮಿನ್ ಯಮಲ್ ಅಪ್ಪಿಕೊಂಡು ಸಾಂತ್ವನ ಹೇಳಿದ ಕ್ಷಣ ಪಂದ್ಯಕ್ಕಿಂತಲೂ ಹೆಚ್ಚು ಗಮನ ಸೆಳೆಯಿತು. ವಿಶ್ವ ಫುಟ್‌ಬಾಲ್‌ನಲ್ಲಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಾಯಕತ್ವ ಹಸ್ತಾಂತರವಾದ ಸಂಕೇತವಾಗಿ ಈ ದೃಶ್ಯವನ್ನು ಹಲವರು ವಿಶ್ಲೇಷಿಸಿದರು.

39 ವರ್ಷದ ಮೆಸ್ಸಿ, ನ್ಯೂಯಾರ್ಕ್–ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅರ್ಜೆಂಟೀನಾ ಅಭಿಮಾನಿಗಳತ್ತ ಭಾವನಾತ್ಮಕವಾಗಿ ದೃಷ್ಟಿ ಹರಿಸುತ್ತಿದ್ದರು. ವಿಶ್ವಕಪ್ ವೇದಿಕೆಯಲ್ಲಿ ಇದು ಅವರ ಕೊನೆಯ ಪಂದ್ಯವಾಗಿರಬಹುದು ಎಂಬ ಊಹಾಪೋಹಗಳ ನಡುವೆಯೇ ಅಭಿಮಾನಿಗಳು ಅವರ ಹೆಸರನ್ನು ಘೋಷಣೆಗಳ ಮೂಲಕ ಮೊಳಗಿಸುತ್ತಿದ್ದರು. ಈ ವೇಳೆ 19 ವರ್ಷದ ಯಮಲ್ ಮೆಸ್ಸಿಯನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು.

ಈ ಕ್ಷಣವು 2007ರಲ್ಲಿ ತೆಗೆದಿದ್ದ ಪ್ರಸಿದ್ಧ ಛಾಯಾಚಿತ್ರವನ್ನೂ ನೆನಪಿಸಿತು. ಚಾರಿಟಿ ಕ್ಯಾಲೆಂಡರ್‌ ಗಾಗಿ ನಡೆದ ಛಾಯಾಚಿತ್ರದಲ್ಲಿ ಆಗ 20 ವರ್ಷದ ಮೆಸ್ಸಿ, ಕೇವಲ ಆರು ತಿಂಗಳ ಶಿಶುವಾಗಿದ್ದ ಲ್ಯಾಮಿನ್ ಯಮಲ್‌ಗೆ ಸ್ನಾನ ಮಾಡಿಸುತ್ತಿರುವ ಚಿತ್ರ ವಿಶ್ವಕಪ್ ಫೈನಲ್‌ ಗೆ ಮುನ್ನ ಮತ್ತೆ ವೈರಲ್ ಆಗಿತ್ತು. ಆಗಿನ ಶಿಶುವೇ ಈಗ ವಿಶ್ವಕಪ್ ವಿಜೇತನಾಗಿ ಮೆಸ್ಸಿಯನ್ನು ಸಮಾಧಾನಪಡಿಸಿದ ದೃಶ್ಯ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿತು.

ಬಾರ್ಸಿಲೋನಾ ಅಕಾಡೆಮಿಯಲ್ಲಿ ಬೆಳೆದಿರುವ ಯಮಲ್, ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಸ್ಥಿತಿಯಲ್ಲೇ ವಿಶ್ವಕಪ್‌ ಗೆ ಆಗಮಿಸಿದ್ದರು. ಆದರೂ 19 ವರ್ಷ ಆರು ದಿನಗಳ ವಯಸ್ಸಿನಲ್ಲಿ ವಿಶ್ವಕಪ್ ಹಾಗೂ ಯುರೋ ಚಾಂಪಿಯನ್‌ಷಿಪ್ ಎರಡನ್ನೂ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಎರಡು ವರ್ಷಗಳ ಹಿಂದೆ ಸ್ಪೇನ್‌ ಗೆ ಯುರೋ ಪ್ರಶಸ್ತಿ ತಂದುಕೊಟ್ಟಿದ್ದ ಅವರು, ಈಗ ವಿಶ್ವಕಪ್ ಜಯಿಸುವ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ ನ ಎರಡು ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್‌ ನಲ್ಲಿ ಯಮಲ್ ಅವರ ಪ್ರದರ್ಶನಕ್ಕೆ ಸ್ಪೇನ್ ತಂಡದ ಸಂಘಟಿತ ಆಟ ಬಲವಾಯಿತು. ಮತ್ತೊಂದೆಡೆ, ಅರ್ಜೆಂಟೀನಾದ ರಕ್ಷಣಾತ್ಮಕ ಆಟದ ನಡುವೆ ಮೆಸ್ಸಿಗೆ ನಿರೀಕ್ಷಿತ ಮಟ್ಟದ ಬೆಂಬಲ ದೊರೆಯಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಗಳಿಸಿದ ಗೋಲಿನ ನೆರವಿನಿಂದ ಸ್ಪೇನ್ 1–0 ಅಂತರದಲ್ಲಿ ಅರ್ಜೆಂಟೀನಾವನ್ನು ಮಣಿಸಿ ಎರಡನೇ ಬಾರಿ ವಿಶ್ವಕಪ್ ಪ್ರಶಸ್ತಿ ಗೆದ್ದಿತು. ಈ ಗೆಲುವಿನೊಂದಿಗೆ ಯಮಲ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ ಸೇರ್ಪಡೆಯಾಯಿತು.

ಲ್ಯಾಮಿನ್ ಯಮಲ್ ತಮ್ಮ ದೇಶಕ್ಕಾಗಿ ಪ್ರಮುಖ ಟೂರ್ನಿಗಳಲ್ಲಿ ಆರಂಭಿಕ ಆಟಗಾರನಾಗಿ ಆಡಿದ 13 ಪಂದ್ಯಗಳಲ್ಲೂ ಸ್ಪೇನ್ ಗೆದ್ದಿದೆ. ಪ್ರಮುಖ ಟೂರ್ನಿಗಳಲ್ಲಿ ಆರಂಭಿಕ ಆಟಗಾರನಾಗಿ ಆಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿದ ಅಪರೂಪದ ದಾಖಲೆಯೂ ಅವರ ಹೆಸರಿನಲ್ಲಿದೆ.

19 ವರ್ಷದ ಪೌ ಕ್ಯೂಬಾರ್ಸಿ ಅವರೊಂದಿಗೆ ಯಮಲ್, ವಿಶ್ವಕಪ್ ಫೈನಲ್‌ ನಲ್ಲಿ ಆರಂಭಿಕ ತಂಡದಲ್ಲಿ ಆಡಿದ ಹಾಗೂ ಪ್ರಶಸ್ತಿ ಗೆದ್ದ ನಾಲ್ಕನೇ ಮತ್ತು ಐದನೇ ಹದಿಹರೆಯದ ಆಟಗಾರರಾದರು. ಇದಕ್ಕೂ ಮೊದಲು 1958ರಲ್ಲಿ ಬ್ರೆಝಿಲ್‌ನ ಪೀಲೆ, 1982ರಲ್ಲಿ ಇಟಲಿಯ ಜ್ಯೂಸೆಪ್ಪೆ ಬೆರ್ಗೊಮಿ ಹಾಗೂ 2018ರಲ್ಲಿ ಫ್ರಾನ್ಸ್‌ ನ ಎಂಬಾಪೆ ಈ ಸಾಧನೆ ಮಾಡಿದ್ದರು.

ಸ್ಪೇನ್ ಮುಖ್ಯ ತರಬೇತುದಾರ ಲೂಯಿಸ್ ಡೆ ಲಾ ಫ್ಯುಯೆಂಟೆ, "ಯಮಲ್ ಅತ್ಯುತ್ತಮ ವಿಶ್ವಕಪ್ ಆಡಿದ್ದಾರೆ. ತಂಡದ ಹಿತಕ್ಕಾಗಿ ಅವರು ತ್ಯಾಗ ಮಾಡಿದ್ದಾರೆ. ಈ ಅನುಭವ ಅವರನ್ನು ಇನ್ನಷ್ಟು ಪ್ರಬುದ್ಧ ಆಟಗಾರನನ್ನಾಗಿ ರೂಪಿಸಲಿದೆ," ಎಂದು ಶ್ಲಾಘಿಸಿದರು.

ಫೈನಲ್‌ ನಲ್ಲಿ ಅರ್ಜೆಂಟೀನಾದ ನಿಕೊಲಾಸ್ ಟ್ಯಾಗ್ಲಿಯಾಫಿಕೊ ಸೇರಿದಂತೆ ಹಲವು ಆಟಗಾರರು ಯಮಲ್ ಮೇಲೆ ದೈಹಿಕ ಒತ್ತಡ ಹೇರಲು ಪ್ರಯತ್ನಿಸಿದರೂ, ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿ ತಮ್ಮ ಆಟವನ್ನು ಮುಂದುವರಿಸಿದರು.

ಇಂಗ್ಲೆಂಡ್ ನ ಮಾಜಿ ಗೋಲ್‌ ಕೀಪರ್ ಹಾಗೂ ಬಿಬಿಸಿ ವಿಶ್ಲೇಷಕ ಜೋ ಹಾರ್ಟ್, "ಯಮಲ್ ಒತ್ತಡದ ನಡುವೆಯೂ ಅಸಾಧಾರಣ ಪ್ರಬುದ್ಧತೆ ಪ್ರದರ್ಶಿಸಿದರು. 19ನೇ ವಯಸ್ಸಿನಲ್ಲೇ ವಿಶ್ವ ಫುಟ್‌ ಬಾಲ್‌ ನ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ," ಎಂದು ಪ್ರಶಂಸಿಸಿದರು.

ಸೌಜನ್ಯ: bbc.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News