3,000 ಟೆಸ್ಟ್ ರನ್‌ ಗಳ ಗಡಿ ದಾಟಿದ ಗಿಲ್

ಸಚಿನ್, ಸೆಹ್ವಾಗ್, ವೆಂಗ್‌ಸರ್ಕಾರ್ ಬಳಿಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಕಿರಿಯ ಆಟಗಾರ

Update: 2026-08-23 19:13 IST

Photo : x@BCCI

ಕೊಲಂಬೊ: ಭಾರತದ ನಾಯಕ ಶುಭಮನ್ ಗಿಲ್ ಅವರು ಟೆಸ್ಟ್ ಕ್ರಿಕೆಟ್‌ ನಲ್ಲಿ 3,000 ರನ್‌ಗಳ ಗಡಿ ದಾಟಿದರು. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಶ್ರೀಲಂಕಾ ವಿರುದ್ಧ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ರವಿವಾರ ಗಿಲ್ ಈ ಸಾಧನೆ ಮಾಡಿದರು.

ಪಂದ್ಯ ಆರಂಭಕ್ಕೂ ಮುನ್ನ ಗಿಲ್ 3,000 ರನ್‌ ಗಳ ಗಡಿ ತಲುಪಲು ಏಳು ರನ್‌ ಗಳ ಅಗತ್ಯವಿತ್ತು. 23ನೇ ಓವರ್‌ ನಲ್ಲಿ ಕೇಶರ ನುವಂತಾ ಅವರ ಎಸೆತವನ್ನು ಗಿಲ್ ಆಡಿದರು. ಚೆಂಡು ಬ್ಯಾಟ್‌ ನ ಹೊರ ಅಂಚಿಗೆ ತಾಗಿ ಬೌಂಡರಿಗೆ ಹೋಯಿತು. ಇದರೊಂದಿಗೆ ಗಿಲ್ 3,000 ರನ್ ಪೂರ್ಣಗೊಳಿಸಿದರು.

ಈ ಸಾಧನೆ ಮಾಡಿದಾಗ ಗಿಲ್ ಅವರಿಗೆ 26 ವರ್ಷ 349 ದಿನ ವಯಸ್ಸಾಗಿತ್ತು. ಇದಕ್ಕೂ ಮೊದಲು ಕಪಿಲ್ ದೇವ್ 26 ವರ್ಷ 356 ದಿನಗಳ ವಯಸ್ಸಿನಲ್ಲಿ 3,000 ಟೆಸ್ಟ್ ರನ್ ಗಳಿಸಿದ್ದರು. ಹೀಗಾಗಿ ಗಿಲ್, ಕಪಿಲ್ ದೇವ್ ಅವರನ್ನು ಹಿಂದಿಕ್ಕಿದರು.

ಗಿಲ್‌ ಗಿಂತ ಕಡಿಮೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಭಾರತದ ಮೂವರು ಆಟಗಾರರೆಂದರೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ದಿಲೀಪ್ ವೆಂಗ್‌ಸರ್ಕಾರ್.

ಸಚಿನ್ 23 ವರ್ಷ 228 ದಿನಗಳ ವಯಸ್ಸಿನಲ್ಲಿ 3,000 ಟೆಸ್ಟ್ ರನ್ ಗಳಿಸಿದ್ದರು. ಸೆಹ್ವಾಗ್ 26 ವರ್ಷ 157 ದಿನಗಳಲ್ಲಿ ಹಾಗೂ ವೆಂಗ್‌ಸರ್ಕಾರ್ 26 ವರ್ಷ 263 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

3,000 ಟೆಸ್ಟ್ ರನ್ ಗಳಿಸಿದಾಗ ಆಟಗಾರರ ವಯಸ್ಸು:

ಸಚಿನ್ ತೆಂಡೂಲ್ಕರ್ — 23 ವರ್ಷ 228 ದಿನ

ವೀರೇಂದ್ರ ಸೆಹ್ವಾಗ್ — 26 ವರ್ಷ 157 ದಿನ

ದಿಲೀಪ್ ವೆಂಗ್‌ಸರ್ಕಾರ್ — 26 ವರ್ಷ 263 ದಿನ

ಶುಭಮನ್ ಗಿಲ್ — 26 ವರ್ಷ 349 ದಿನ

ಕಪಿಲ್ ದೇವ್ — 26 ವರ್ಷ 356 ದಿನ

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ ನಲ್ಲೇ ಗಿಲ್ 3,000 ರನ್‌ ಗಳ ಗಡಿ ತಲುಪಲು ಏಳು ರನ್‌ ಗಳ ಕೊರತೆಯಲ್ಲಿದ್ದರು. ಕೊಲಂಬೊದಲ್ಲಿ ಅವರು ಆ ಸಾಧನೆಯನ್ನು ಪೂರ್ಣಗೊಳಿಸಿದರು.

ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಗಿಲ್, 13ನೇ ಎಸೆತದಲ್ಲಿ ಪ್ರಬಾತ್ ಜಯಸೂರ್ಯ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಖಾತೆ ತೆರೆದರು. ನಂತರ ಮತ್ತೊಂದು ಬೌಂಡರಿ ಗಳಿಸಿ 3,000 ರನ್‌ ಗಳ ಗಡಿ ದಾಟಿದರು.

ಈ ಮೈಲಿಗಲ್ಲು ಸಾಧಿಸುವಷ್ಟರಲ್ಲಿ ಶ್ರೀಲಂಕಾ ಭಾರತದ ಎರಡು ವಿಕೆಟ್‌ ಗಳನ್ನು ಕಬಳಿಸಿತ್ತು. ಕೆ.ಎಲ್. ರಾಹುಲ್ 18 ರನ್ ಗಳಿಸಿ ಲಹಿರು ಕುಮಾರ ಅವರ ಎಸೆತದಲ್ಲಿ ಔಟಾದರು. ಬಳಿಕ ಯಶಸ್ವಿ ಜೈಸ್ವಾಲ್ 45 ರನ್ ಗಳಿಸಿ ಅಸಿತಾ ಫರ್ನಾಂಡೊ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News