ದಕ್ಷಿಣ ಆಫ್ರಿಕಾ ಪ್ರವಾಸ: ಭಾರತದ ಮೂರೂ ತಂಡಗಳಿಗೆ ಸ್ಮೃತಿ ಮಂಧಾನ ನಾಯಕಿ
Photo Credit: indiatodayne
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಡಿಸೆಂಬರ್‌ನಲ್ಲಿ ನಡೆಯಲಿರುವ ಎಲ್ಲ ಮೂರು ಮಾದರಿಯ ಪಂದ್ಯಗಳಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ. ಸ್ಮೃತಿ ಮಂಧಾನರನ್ನು ಟೆಸ್ಟ್, ಏಕದಿನ ಹಾಗೂ ಟಿ-20 ತಂಡಗಳ ನಾಯಕಿಯನ್ನಾಗಿ ನೇಮಿಸಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸವು ಒಂದು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಒಳಗೊಂಡಿದೆ. ಡಿ.9ರಂದು ಟೆಸ್ಟ್ ಪಂದ್ಯದೊಂದಿಗೆ ಸರಣಿಯು ಆರಂಭವಾಗಲಿದೆ.
ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ದೀಪ್ತಿ ಶರ್ಮಾರನ್ನು ಉಪ ನಾಯಕಿಯನ್ನಾಗಿ ನೇಮಿಸಲಾಗಿದೆ. ಶೆಫಾಲಿ ವರ್ಮಾ ಟಿ-20 ತಂಡದ ಉಪ ನಾಯಕಿಯಾಗಿದ್ದಾರೆ. ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ತಲಾ 15 ಸದಸ್ಯರನ್ನು, ಟಿ-20 ತಂಡಕ್ಕೆ 17 ಸದಸ್ಯರನ್ನು ಸೇರಿಸಲಾಗಿದೆ.
ಏಕದಿನ ತಂಡದಲ್ಲಿ ಸ್ನೇಹ ರಾಣಾ ಬದಲಿಗೆ ವೈಷ್ಣವಿ ಶರ್ಮಾ ಆಯ್ಕೆಯಾಗಿದ್ದಾರೆ. ನಿಕಿ ಪ್ರಸಾದ್, ಕಮಲಿನಿ ಹಾಗೂ ಅನುಷ್ಕಾ ಶರ್ಮಾ ಸಹಿತ ಹಲವಾರು ಯುವ ಅಟಗಾರ್ತಿಯರು ಟಿ-20 ತಂಡದಲ್ಲಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯು ಪಾರ್ಲ್, ಕೇಪ್‌ಟೌನ್, ಬ್ಲೋಮ್‌ಫೋಂಟೈನ್‌ನಲ್ಲಿ ಕ್ರಮವಾಗಿ ಡಿ.16, 19 ಹಾಗೂ 22ರಂದು ನಡೆಯಲಿದೆ.
ಟಿ-20 ಸರಣಿಯು ಡಿ.26ರಿಂದ ಆರಂಭವಾಗಲಿದ್ದು, ಡಿ.29 ಹಾಗೂ 30ರಂದು ಇನ್ನೆರಡು ಪಂದ್ಯಗಳನ್ನು ಆಡಲಾಗುತ್ತದೆ.