ಆರ್ಯವೀರ್ ಸೆಹ್ವಾಗ್ | Photo Credit : X

ಹೊಸದಿಲ್ಲಿ, ನ. 6: ನೇಪಾಳ ಅಂಡರ್-19 ತಂಡದ ವಿರುದ್ಧ 10 ವಿಕೆಟ್ಗಳ ಅಂತರದಿಂದ ಜಯಶಾಲಿಯಾಗುವುದರೊಂದಿಗೆ ಭಾರತದ ಅಂಡರ್-19 ತಂಡವು ಅಂಡರ್-19 ಏಶ್ಯಕಪ್ ನಲ್ಲಿ ತನ್ನ ಅಭಿಯಾನ ಆರಂಭಿಸಿದೆ.

ವೇಗದ ಬೌಲರ್ ಇಶಾನ್ ಸೂದ್ ಹೊಸ ಚೆಂಡಿನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿ ಭಾರತದ ಗೆಲುವಿಗೆ ತನ್ನದೇ ಆದ ಕೊಡುಗೆ ನೀಡಿದರು.

ಆರ್ಯವೀರ್ ಸೆಹ್ವಾಗ್ ಹಾಗೂ ಲಕ್ಷ್ಯ ರಾಯ್ಚಂದಾನಿ ಕೇವಲ 19.1 ಓವರ್ ಗಳಲ್ಲಿ 129 ರನ್ ಗಳ ಗುರಿಯನ್ನು ತಲುಪುವಲ್ಲಿ ನೆರವಾದರು. ಸೆಹ್ವಾಗ್ 52 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ಸಹಿತ ಔಟಾಗದೆ 70 ರನ್ ಗಳಿಸಿದರೆ, ರಾಯ್ಚಂದಾನಿ 63 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಿತ ಔಟಾಗದೆ 53 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ಲಕ್ಷ್ಯ ರಾಯ್ಚಂದಾನಿ ಫೀಲ್ಡಿಂಗ್ ಆಯ್ದುಕೊಂಡರು. ಇಶಾನ್ ಸೂದ್ ಹೊಸ ಚೆಂಡಿನಲ್ಲಿ ಅಮೋಘ ಬೌಲಿಂಗ್ ಮಾಡಿದ್ದು, ಆರಂಭಿಕ ಬ್ಯಾಟರ್ ಪ್ರಸಿದ್ಧ ಜೈಶಿ (1 ರನ್), ಮೂರನೇ ಕ್ರಮಾಂಕದ ಬ್ಯಾಟರ್ ಸೂರ್ಯಾಂಶು ಕೊಯಿರಾಲಾ (5 ರನ್) ಹಾಗೂ ನಾಲ್ಕನೇ ಕ್ರಮಾಂಕದ ನಿಶ್ಚಲ್ ಕ್ಷೆತ್ರಿ (0) ಅವರ ವಿಕೆಟ್ಗಳನ್ನು ಉರುಳಿಸಿದರು. ಆಗ ನೇಪಾಳ ತಂಡವು ಒಂಬತ್ತನೇ ಓವರ್ ನಲ್ಲಿ 27 ರನ್ ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.

ಎಡಗೈ ವೇಗದ ಬೌಲರ್ ಮನಾಲ್ ಚೌಹಾಣ್ ಅವರು ನೀರಜ್ ಯಾದವ್ ಅವರನ್ನು ಬೌಲ್ಡ್ ಮಾಡಿ ನೇಪಾಳದ ನಾಲ್ಕನೇ ವಿಕೆಟ್ ಉರುಳಿಸಿದರು. ಐದನೇ ವಿಕೆಟ್ಗೆ 43 ರನ್ ಗಳ ಜೊತೆಯಾಟ ನಡೆಸಿದ ದರ್ಶ್ ಸೋನಾಲ್ (43 ರನ್, 93 ಎಸೆತ) ಹಾಗೂ ಆಶೀಶ್ ಲುಹಾರ್ (29 ರನ್, 45 ಎಸೆತ) ಇನಿಂಗ್ಸ್ ಆಧರಿಸಲು ಯತ್ನಿಸಿದರು. ಆದರೆ, ಯಶ್ವೀರ್ ಗೌಡ್ ಅವರು ಆಶೀಶ್ ಅವರ ವಿಕೆಟ್ ಉರುಳಿಸಿ ಮತ್ತೊಮ್ಮೆ ಕುಸಿಯಲು ಕಾರಣರಾದರು. ನೇಪಾಳ ತಂಡವು 42.3 ಓವರ್ ಗಳಲ್ಲಿ 128 ರನ್ ಗಳಿಸಿ ಆಲೌಟಾಯಿತು. ದರ್ಶ್ ಸೋನಾಲ್ ಸರ್ವಾಧಿಕ ಸ್ಕೋರ್ ಗಳಿಸಿದರು.

ಸೂದ್ 18 ರನ್ ಗಳಿಗೆ ಮೂರು ವಿಕೆಟ್ಗಳನ್ನು ಪಡೆದರು. ಅರ್ಜುನ್ ರಾಜ್ಪುತ್ ಕೂಡ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ಗಳನ್ನು ಉರುಳಿಸಿದರು. ಗೌಡ್ ಎರಡು ವಿಕೆಟ್ ಪಡೆದರೆ, ಕಾವ್ಯ ಪರೇಶ್ ಪಟೇಲ್ ಹಾಗೂ ಚೌಹಾಣ್ ತಲಾ ಒಂದು ವಿಕೆಟ್ ಪಡೆದರು.

ಭಾರತದ ಅಂಡರ್-19 ತಂಡವು ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ರವಿವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor