Asian Games | ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪಾಕಿಸ್ತಾನಕ್ಕೆ 3–0 ಯಿಂದ ಸೋಲುಣಿಸಿದ ಭಾರತ; ಹಸ್ತಲಾಘವಕ್ಕೆ ಅಡ್ಡಿಯಾಗದ ರಾಜಕೀಯ ಭಿನ್ನಾಭಿಪ್ರಾಯ
ಭಾರತ-ಪಾಕಿಸ್ತಾನ ಕ್ರೀಡಾಪಟುಗಳು (Photo: India Today)
ಹೊಸದಿಲ್ಲಿ: ಏಶ್ಯನ್ ಗೇಮ್ಸ್ ನ ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತವು ಪಾಕಿಸ್ತಾನವನ್ನು 3–0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿತು. ಎರಡೂ ದೇಶಗಳ ಆಟಗಾರ್ತಿಯರು ಪ್ರತಿ ಪಂದ್ಯದ ಬಳಿಕ ಹಸ್ತಲಾಘವ ಮಾಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು.
ಭಾರತದ ಪರ ಸುತಿರ್ಥಾ ಮುಖರ್ಜಿ, ಸಿಂಡ್ರೆಲಾ ದಾಸ್ ಮತ್ತು ಶ್ರೀಜಾ ಅಕುಲಾ ಗೆಲುವು ದಾಖಲಿಸಿದರು. ಭಾರತವು ಸಿಂಗಾಪುರವನ್ನು 3–2 ಅಂತರದಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿತ್ತು.
ಸುತಿರ್ಥಾ ಸುಲಭ ಗೆಲುವು: ಮೊದಲ ಪಂದ್ಯದಲ್ಲಿ ಸುತಿರ್ಥಾ ಅವರು ಅಲೀನಾ ಖಾನ್ ಅವರನ್ನು 11–3, 11–3, 11–4 ಅಂತರದಲ್ಲಿ ನೇರ ಮೂರು ಗೇಮ್ ಗಳಲ್ಲಿ ಸೋಲಿಸಿದರು. ಇದರೊಂದಿಗೆ ಭಾರತ 1–0 ಮುನ್ನಡೆ ಸಾಧಿಸಿತು. ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರ್ತಿಯರು ಹಸ್ತಲಾಘವ ಮಾಡಿದರು.
ಎರಡನೇ ಪಂದ್ಯದಲ್ಲಿ ಸಿಂಡ್ರೆಲಾ ದಾಸ್ ಅವರು ಕಲ್ಸೂಮ್ ಖಾನ್ ಅವರನ್ನು 11–6, 11–7, 11–5 ಅಂತರದಲ್ಲಿ ಸೋಲಿಸಿದರು. ಇದರಿಂದ ಭಾರತ 2–0 ಮುನ್ನಡೆ ಪಡೆದುಕೊಂಡಿತು.
ಮೂರನೇ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ಫಾತಿಮಾ ಖಾನ್ ಅವರನ್ನು 11–4, 11–4, 11–5 ಅಂತರದಲ್ಲಿ ಮಣಿಸಿದರು. ಮೂರು ಗೇಮ್ ಗಳಲ್ಲಿ ಎದುರಾಳಿಗೆ ಕೇವಲ 13 ಅಂಕಗಳನ್ನು ಬಿಟ್ಟುಕೊಟ್ಟ ಶ್ರೀಜಾ, ಭಾರತದ ಗೆಲುವನ್ನು ಖಚಿತಪಡಿಸಿದರು.
ಇದರೊಂದಿಗೆ ಭಾರತವು ಮತ್ತೊಂದು 3–0 ಅಂತರದ ಗೆಲುವು ದಾಖಲಿಸಿ ಮುಂದಿನ ಹಂತಕ್ಕೆ ಮುನ್ನಡೆಯಿತು. ಭಾರತೀಯ ಪುರುಷರ ತಂಡವೂ ಸೋಮವಾರದ ಬಳಿಕ ಪಾಕಿಸ್ತಾನವನ್ನು ಎದುರಿಸಲಿದೆ.
ಕ್ರಿಕೆಟ್ ನಲ್ಲಿ ಮಾತ್ರ ವಿಭಿನ್ನ ನಿಲುವು
ಕಳೆದ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕದ ನಿಲುವು ಅನುಸರಿಸುತ್ತಿದೆ. ಪಂದ್ಯಕ್ಕೂ ಮುನ್ನ ಮತ್ತು ಬಳಿಕ ಭಾರತೀಯ ನಾಯಕರು ಹಾಗೂ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕುತ್ತಿಲ್ಲ.
ಆದರೆ, ಇತರ ಕ್ರೀಡೆಗಳಲ್ಲಿ ಈ ನಿಲುವು ಕಂಡುಬರುತ್ತಿಲ್ಲ. ಇತ್ತೀಚೆಗೆ ನಡೆದ ಹಾಕಿ ವಿಶ್ವಕಪ್ ನಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರು ಎದುರಾಳಿ ತಂಡದ ಆಟಗಾರರೊಂದಿಗೆ ಹೈ-ಫೈವ್ ಮಾಡಿದ್ದರು.
ಟೇಬಲ್ ಟೆನಿಸ್‌ನಲ್ಲಿ ಭಾರತ–ಪಾಕಿಸ್ತಾನ ಆಟಗಾರ್ತಿಯರು ಪಂದ್ಯ ಮುಗಿದ ಬಳಿಕ ಪರಸ್ಪರ ಕೈಕುಲುಕುವ ಮೂಲಕ ಕ್ರೀಡಾಂಗಣದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಕ್ರೀಡಾಸ್ಫೂರ್ತಿಗೆ ಆದ್ಯತೆ ನೀಡಿದರು.