ಉಬೆರ್ ಕಪ್ | ಕೆನಡಾವನ್ನು ಕೆಡವಿದ ಭಾರತದ ಮಹಿಳಾ ‌ಬ್ಯಾಡ್ಮಿಂಟನ್ ತಂಡ

Update: 2024-04-28 02:50 GMT

ಚಲಿಹಾ | PC : NDTV 

ಹೊಸದಿಲ್ಲಿ : ಸ್ಪೂರ್ತಿಯುತ ಪ್ರದರ್ಶನ ನೀಡಿ ಅಗ್ರ ರ‍್ಯಾಂಕಿನ ಮಿಚೆಲ್ ಅಲಿ ಅವರನ್ನು ಸೋಲಿಸಿದ ಅಶ್ಮಿತಾ ಚಲಿಹಾ ಚೀನಾದ ಚೆಂಗ್ಡುವಿನಲ್ಲಿ ಶನಿವಾರ ನಡೆದ ಉಬೆರ್ ಕಪ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ತಂಡಕ್ಕೆ ಸಕಾರಾತ್ಮಕ ಆರಂಭ ಒದಗಿಸಿದರು.

ಭಾರತ ತಂಡ ಕೆನಡಾ ತಂಡವನ್ನು 4-1 ಅಂತರದಿಂದ ಮಣಿಸಿತು.

ಎಡಗೈ ಆಟಗಾರ್ತಿ ಚಲಿಹಾ 42 ನಿಮಿಷಗಳ ಕಾಲ ನಡೆದ ಆರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.25ನೇ ಆಟಗಾರ್ತಿ ಲೀ ಅವರನ್ನು 26-24 24-22 ಸೆಟ್‌ಗಳ ಅಂತರದಿಂದ ಮಣಿಸಿದರು. 2014 ಹಾಗೂ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದ ಲೀ ವಿರುದ್ಧ ಚಲಿಹಾ ಮಹತ್ವದ ಗೆಲುವು ದಾಖಲಿಸಿದರು.

ಫೆಬ್ರವರಿಯಲ್ಲಿ ಭಾರತ ಚೊಚ್ಚಲ ಏಶ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಜಯಶಾಲಿಯಾದಾಗ ತಂಡದ ಭಾಗವಾಗಿದ್ದ ಚಲಿಹಾ ಅವರು ಪ್ರಮುಖ ಆಟಗಾರ್ತಿಯಾದ ಪಿ.ವಿ.ಸಿಂಧು ಅನುಪಸ್ಥಿತಿಯಲ್ಲಿ ನಾಯಕತ್ವವಹಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸೀನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದ ಯುವ ಮಹಿಳೆಯರ ಡಬಲ್ಸ್ ಜೋಡಿ ಪ್ರಿಯಾ ಹಾಗೂ ಶ್ರುತಿ ಮಿಶ್ರಾ ಅವರು ಕ್ಯಾಥರಿನ್ ಚೊಯ್ ಹಾಗೂ ಜೆಸ್ಲಿನ್ ಚೌರನ್ನು 21-12, 21-10 ಅಂತರದಿಂದ ಸೋಲಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಇಶಾರಾಣಿ ಅವರು ವೆನ್ ಯು ಝಾಂಗ್‌ರನ್ನು 21-13, 21-12 ಅಂತರದಿಂದ ಸೋಲಿಸಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು.

2ನೇ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸಿಮ್ರಾನ್ ಸಿಂಘಿ ಹಾಗೂ ರಿತಿಕಾ ಥಾಕೆರ್ ಕೆನಡಾದ ಜಾಕೀ ಡೆಂಟ್ ಹಾಗೂ ಕ್ರಿಸ್ಟಾಲ್ ವಿರುದ್ಧ 19-21, 15-21 ಅಂತರದಿಂದ ಸೋತಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಖರ್ಬ್ ಅವರು ಎಲಿಯಾನಾ ಝಾಂಗ್‌ರನ್ನು ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 21-15, 21-11 ಅಂತರದಿಂದ ಸೋಲಿಸಿ ಭಾರತ 4-1 ಅಂತರದಿಂದ ಜಯ ಸಾಧಿಸಲು ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News