ಲಿಸ್ಟ್ ‘A’ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ವೈಭವ್ ಸೂರ್ಯವಂಶಿ
Update: 2026-06-21 22:50 IST
Photo : x@BCCI
ಡಾಂಬುಲ್ಲಾ, ಜೂ.21: ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿದ ವೈಭವ್ ಸೂರ್ಯವಂಶಿ ತಾನೋರ್ವ ಭಾರತದ ಉಜ್ವಲ ಪ್ರತಿಭೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ 15 ವರ್ಷದ ಸೂರ್ಯವಂಶಿ 324.14ರ ಸ್ಟ್ರೈಕ್‌ರೇಟ್ ನಲ್ಲಿ 10 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳ ನೆರವಿನಿಂದ 94 ರನ್ ಗಳಿಸಿ ಕೇವಲ ಆರು ರನ್‌ಗಳಿಂದ ಶತಕ ವಂಚಿತರಾದರು. 50 ಓವರ್ ಮಾದರಿಯಲ್ಲಿ ಭಾರತ ‘ಎ’ ತಂಡದ ಪರ ಅತ್ಯಂತ ಸ್ಫೋಟಕ ಇನಿಂಗ್ಸ್ ಆಡಿದರು.
ಆರಂಭಿಕ ಬ್ಯಾಟರ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೊದಲ 11 ಎಸೆತಗಳಲ್ಲಿ 4, 4, 4, 6, 6, 0, 6, 4, 4, 6, 6 ಸಿಡಿಸಿ ಶ್ರೀಲಂಕಾದ ಬೌಲರ್ ಗಳ ಬೆವರಿಳಿಸಿದರು.
ಎಡಗೈ ಬ್ಯಾಟರ್ ಸೂರ್ಯವಂಶಿ, ಶ್ರೀಲಂಕಾದ ಕೌಶಲ್ಯ ವೀರರತ್ನೆ 2005ರಲ್ಲಿ ನಿರ್ಮಿಸಿದ್ದ 12 ಎಸೆತಗಳ ಅರ್ಧಶತಕದ ವಿಶ್ವದಾಖಲೆಯನ್ನು ಮುರಿದರು.