ವಿಶ್ವ ಆರ್ಚರಿ ಪ್ಯಾರಾ ಸರಣಿ ಹಂತ-3: ಅವಳಿ ಚಿನ್ನ ಗೆದ್ದು ಮಿಂಚಿದ ಭಾರತದ ಪ್ಯಾರಾ ಆರ್ಚರ್‌ಗಳು
Photo Credit : PTI
ಹೊಸದಿಲ್ಲಿ: ವಿಶ್ವ ಆರ್ಚರಿ ಪ್ಯಾರಾ ಸರಣಿಯ ಮೂರನೇ ಹಂತದಲ್ಲಿ ಭಾರತದ ಪ್ಯಾರಾ ಆರ್ಚರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಪುರುಷರ ರಿಕರ್ವ್ ಹಾಗೂ ಕಾಂಪೌಂಡ್ ತಂಡಗಳು ಚಿನ್ನದ ಪದಕ ಜಯಿಸಿದರೆ, ಮಹಿಳೆಯರ ರಿಕರ್ವ್ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ.
ಪುರುಷರ ಕಾಂಪೌಂಡ್ ಟೀಮ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಟೋಮನ್ ಕುಮಾರ್ ಹಾಗೂ ಶ್ಯಾಮ್ ಸುಂದರ್ ಸ್ವಾಮಿ ಇರಾಕ್‌ನ ಅಬ್ಬಾಸ್ ಹಾಗೂ ಅನ್ವರ್‌ರನ್ನು 152-139 ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿದರು.
ಡಬಲ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಹರ್ವಿಂದರ್ ಸಿಂಗ್ ಹಾಗೂ ವಿಜಯ್ ಅವರನ್ನೊಳಗೊಂಡ ರಿಕರ್ವ್ ತಂಡವು ಸ್ಲೋವಾಕಿಯದ ಡೇವಿಡ್ ಇವಾನ್ ಹಾಗೂ ಡೆನಿಸ್ ಇವಾನ್‌ರನ್ನು 6-2 ಅಂತರದಿಂದ ಮಣಿಸಿ ಅಗ್ರ ಸ್ಥಾನ ಪಡೆದರು.
ಭಾವನಾ ಹಾಗೂ ಪೂಜಾ ಅವರನ್ನೊಳಗೊಂಡ ಭಾರತದ ಮಹಿಳೆಯರ ರಿಕರ್ವ್ ತಂಡವು ಚೀನಾ ತಂಡದ ವಿರುದ್ಧ 0-6 ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಕೂಡ ಭಾರತವು ಸ್ವಲ್ಪದರಲ್ಲೇ ಮತ್ತೊಂದು ಪದಕದಿಂದ ವಂಚಿತವಾಯಿತು. ಶೀತಲ್ ದೇವಿ ಹಾಗೂ ಪಾಯಲ್ ನಾಗ್ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಚೀನಾ ವಿರುದ್ಧ ಸೋತಿದ್ದಾರೆ.
ಕಾಂಪೌಂಡ್ ವಿಭಾಗದಲ್ಲಿ ಟೋಮನ್ ಹಾಗೂ ಸ್ವಾಮಿಗೆ ಚಿನ್ನ
ನೀರಸ ಆರಂಭದಿಂದ ಹೊರ ಬಂದಿರುವ ಟೋಮನ್ ಹಾಗೂ ಸ್ವಾಮಿ ಪುರುಷರ ಕಾಂಪೌಂಡ್ ಸ್ಪರ್ಧೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಸುತ್ತಿನಲ್ಲಿ ಭಾರತೀಯ ಜೋಡಿಯು ಕೇವಲ 8 ಅಂಕ ಗಳಿಸಿತು. ಮುಂದಿನ 12 ಬಾಣಗಳಲ್ಲಿ ತಮ್ಮ ನಿಖರತೆಯನ್ನು ಉತ್ತಮಪಡಿಸಿಕೊಂಡರು. ಈ ವೇಳೆ ಕೇವಲ ಐದು ಅಂಕ ಕೈಚೆಲ್ಲಿದರು.
ಸ್ಥಿರ ಪ್ರದರ್ಶನದ ಮೂಲಕ ಭಾರತೀಯ ಬಿಲ್ಲುಗಾರರು ಇರಾಕ್‌ನ ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿದರು. ಸ್ಪರ್ಧೆಯ ಉಳಿದ ಅವಧಿಯಲ್ಲಿ ಸ್ಕೋರಿಂಗ್ ಒತ್ತಡವನ್ನು ನಿಭಾಯಿಸಿದ ಭಾರತೀಯ ಆಟಗಾರರು ಸುಲಭವಾಗಿ ಜಯ ಸಾಧಿಸಿ ಚಿನ್ನದ ಪದಕ ಜಯಿಸಿದರು.
ರಿಕರ್ವ್ ವಿಭಾಗದಲ್ಲಿ ಪುಟಿದೆದ್ದ ಹರ್ವಿಂದರ್: ಹರ್ವಿಂದರ್ ಹಾಗೂ ವಿಜಯ್ ರಿಕರ್ವ್ ಟೀಮ್ ವಿಭಾಗದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಭಾರತಕ್ಕೆ ಪುರುಷರ ಟೀಮ್ ವಿಭಾಗದಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟರು.
ಸ್ಲೋವಾಕಿಯದ ಜೋಡಿ ಮೊದಲ ಸೆಟ್ಟನ್ನು 37-34ರಿಂದ ಗೆದ್ದುಕೊಂಡಿತು. ತಕ್ಷಣವೇ ಪ್ರತಿಕ್ರಿಯಿಸಿದ ಭಾರತೀಯರು ನಂತರದ ಸೆಟ್‌ಗಳಲ್ಲಿ ಸಾಕಷ್ಟು ಸ್ಕೋರ್‌ಗಳನ್ನು ಕಲೆ ಹಾಕಿದರು.
2024ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಆರ್ಚರ್ ಎನಿಸಿಕೊಂಡಿರುವ ಹರ್ವಿಂದರ್ ಟೋಕಿಯೊ 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಹರ್ವಿಂದರ್-ವಿಜಯ್ ಮೂರನೇ ಸೆಟ್ಟನ್ನು 38-34ರಿಂದ ಗೆದ್ದ ನಂತರ ಭಾರತವು 4-2 ಮುನ್ನಡೆ ಪಡೆಯಿತು. ನಾಲ್ಕನೇ ಸೆಟ್ಟನ್ನು 35-31 ಅಂತರದಿಂದ ಗೆದ್ದುಕೊಂಡು 6-2 ಅಂತರದಿಂದ ಜಯಶಾಲಿಯಾದರು.
ಬೆಳ್ಳಿ ಗೆದ್ದ ಭಾವನಾ ಹಾಗೂ ಪೂಜಾ: ಮಹಿಳೆಯರ ರಿಕರ್ವ್ ಫೈನಲ್‌ನಲ್ಲಿ ಚೀನಾ ಆಟಗಾರರಿಗೆ ಪೈಪೋಟಿ ನೀಡುವಲ್ಲಿ ವಿಫಲವಾದ ಭಾವನಾ ಹಾಗೂ ಪೂಜಾ 0-6 ಅಂತರದಿಂದ ಸೋತಿದ್ದಾರೆ.
ಚೀನಾ ತಂಡವು ಮೊದಲ ಸೆಟ್ಟನ್ನು 34-23 ಅಂತರದಿಂದ ಗೆದ್ದುಕೊಂಡಿತು. ಭಾರತೀಯರು ಎರಡನೇ ಸೆಟ್‌ನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದರೂ 33-35 ಅಂತರದಿಂದ ಸೋತರು. ಮೂರನೇ ಸೆಟ್ 30-31ರಿಂದ ಸೋತರು. ಭಾರತವು ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಡಿತು. ಇಡೀ ಫೈನಲ್‌ನಲ್ಲಿ 10 ಅಂಕ ಗಳಿಸುವಲ್ಲಿ ವಿಫಲವಾಯಿತು.
ಚೀನಾ ತಂಡವು ಅತ್ಯುತ್ತಮ ಪ್ರದರ್ಶನ ನೀಡದೇ ಇದ್ದರೂ ಭಾರತದ ಅಸ್ಥಿರ ಪ್ರದರ್ಶನವು ಚೀನಾದ ಜೋಡಿಗೆ ಚಿನ್ನದ ಪದಕ ತನ್ನಲ್ಲೇ ಉಳಿಸಿಕೊಳ್ಳಲು ನೆರವಾಯಿತು.
ಕಂಚು ವಂಚಿತರಾದ ಶೀತಲ್ ಹಾಗೂ ಪಾಯಲ್: ಶೀತಲ್ ದೇವಿ ಹಾಗೂ ಪಾಯಲ್ ನಾಗ್ ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಚೀನಾದ ವಾಂಗ್ ಹಾಗೂ ಫಾಂಗ್‌ಕ್ಸಿಯಾ ವಿರುದ್ಧ ಸೋತಿದ್ದಾರೆ.
16 ಬಾಣಗಳ ಸ್ಪರ್ಧೆಯುದ್ದಕ್ಕೂ ಭಾರತೀಯ ಜೋಡಿಯು ಸ್ಕೋರಿಂಗ್ ಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಎರಡನೇ ಸೆಟ್‌ನಲ್ಲಿ 73-74 ಸೋಲನುಭವಿಸಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಮೂರನೇ ಸೆಟ್‌ನಲ್ಲಿನ ಕಳಪೆ ಪ್ರದರ್ಶನವು ಚೀನಾ ಮರಳಿ ಹೋರಾಡಲು ಅನುವು ಮಾಡಿಕೊಟ್ಟಿತು. ಆ ನಂತರ ಚೇತರಿಸಿಕೊಳ್ಳುವಲ್ಲಿ ವಿಫಲವಾದ ಭಾರತವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಒಂದೇ ದಿನ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದಿರುವ ಭಾರತ ತಂಡವು ವರ್ಲ್ಡ್ ಆರ್ಚರಿ ಪ್ಯಾರಾ ಸೀರಿಸ್ ಸ್ಟೇಜ್-3ರಲ್ಲಿ ಉತ್ತಮ ನಿರ್ವಹಣೆಯ ಭರವಸೆ ಮೂಡಿಸಿದೆ.