ಪಾಕಿಸ್ತಾನದ ಮಹಿಳಾ ತಂಡದ ನಾಯಕಿ ಫಾತಿಮಾ ಸನಾಗೆ ICC ದಂಡ
ದುಬೈ, ಸೆ. 7: ಭಾರತ ತಂಡದ ವಿರುದ್ಧ ರವಿವಾರ ನಡೆದ ಮಹಿಳೆಯರ ಏಷ್ಯಕಪ್ ನ ‘ಎ’ ಗುಂಪಿನ ಪಂದ್ಯದ ವೇಳೆ ICC ನೀತಿ ಸಂಹಿತೆಯ ಲೆವೆಲ್-1 ಅನ್ನು ಉಲ್ಲಂಘಿಸಿರುವ ಪಾಕಿಸ್ತಾನ ಮಹಿಳಾ ತಂಡದ ನಾಯಕಿ ಫಾತಿಮಾ ಸನಾಗೆ ಪಂದ್ಯಶುಲ್ಕದಲ್ಲಿ ಶೇ. 10ರಷ್ಟು ದಂಡ ವಿಧಿಸಲಾಗಿದೆ.
ಅಂತರರಾಷ್ಟ್ರೀಯ ಪಂದ್ಯದ ವೇಳೆ ಎದುರಾಳಿ ಬ್ಯಾಟರ್ ರನ್ನು ಔಟ್ ಮಾಡಿದ ಬಳಿಕ ಆಕ್ರಮಣಕಾರಿ ಪ್ರತಿಕ್ರಿಯೆಯ ಮೂಲಕ ಪ್ರಚೋದಿಸುವುದಕ್ಕೆ ಸಂಬಂಧಿಸಿದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಾಗಿನ ICC ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಫಾತಿಮಾ ಉಲ್ಲಂಘಿಸಿರುವುದು ಕಂಡುಬಂದಿದೆ.
ಫಾತಿಮಾಗೆ ದಂಡವಲ್ಲದೆ, ಅಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಫಾತಿಮಾ 24 ತಿಂಗಳಲ್ಲಿ ಎರಡನೇ ಬಾರಿ ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ.
ಫಾತಿಮಾ 2025ರ ಆಗಸ್ಟ್ 6ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ತಂಡದ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದ ವೇಳೆ ಡಿಮೆರಿಟ್ ಪಾಯಿಂಟ್ ಸ್ವೀಕರಿಸಿದ್ದರು.
ಭಾರತದ ಇನಿಂಗ್ಸ್ ನ ಎರಡನೇ ಓವರ್ನಲ್ಲಿ ಘಟನೆ ನಡೆದಿದ್ದು, ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾರನ್ನು ಔಟ್ ಮಾಡಿದ ಫಾತಿಮಾ ಅವರು ಶೆಫಾಲಿಗೆ ಪೆವಿಲಿಯನ್ ಗೆ ಹೋಗುವಂತೆ ಸನ್ನೆ ಮಾಡಿದ್ದರು.
ತಪ್ಪನ್ನು ಒಪ್ಪಿಕೊಂಡಿರುವ ಫಾತಿಮಾ, ಎಮಿರೇಟ್ಸ್ ICC ಇಂಟರ್ನ್ಯಾಶನಲ್ ಪ್ಯಾನೆಲ್ ನ ಮ್ಯಾಚ್ ರೆಫರಿ ಸುಪ್ರಿಯಾ ರಾಣಿ ದಾಸ್ ನೀಡಿದ ದಂಡವನ್ನು ಸ್ವೀಕರಿಸಿದ್ದಾರೆ.