ತೈಪೆ ಓಪನ್: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ತನ್ವಿ ಶರ್ಮಾ ಚಾಂಪಿಯನ್

18 ವರ್ಷಗಳ ನಂತರ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ

Update: 2026-08-02 22:40 IST

Tanvi Sharma | Photo: x/@Pvsindhu1

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ತನ್ವಿ ಶರ್ಮಾ ತನ್ನ ವೃತ್ತಿಬದುಕಿನಲ್ಲಿ ಮೊದಲ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ವಿಯೆಟ್ನಾಂನ ಲಿನ್ಹ್ ಗುಯೆನ್ರನ್ನು ಮಣಿಸಿದ ತನ್ವಿ ಈ ಸಾಧನೆ ಮಾಡಿದರು.

ಪಂಜಾಬ್ ನ 17ರ ವಯಸ್ಸಿನ ಆಟಗಾರ್ತಿ ತನ್ವಿ ಅವರು ಕೇವಲ 36 ನಿಮಿಷಗಳ ಹೋರಾಟದಲ್ಲಿ ಆರನೇ ಶ್ರೇಯಾಂಕದ ಗುಯೆನ್ರನ್ನು 21-16, 21-16 ನೇರ ಗೇಮ್ಗಳ ಅಂತರದಿಂದ ಮಣಿಸುವ ಮೂಲಕ ತನ್ನ ಚೊಚ್ಚಲ ಸೂಪರ್-300 ಟ್ರೋಫಿಯನ್ನು ಎತ್ತಿ ಹಿಡಿದರು.

ಪಿ.ವಿ.ಸಿಂಧು ಅವರ ಮಾಜಿ ಕೋಚ್ ಪಾರ್ಕ್ ಸಾಂಗ್ ಅವರಿಂದ ತರಬೇತಿ ಪಡೆಯುತ್ತಿರುವ ತನ್ವಿ 2008ರ ನಂತರ ತೈಪೆ ಓಪನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿಯೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 18 ವರ್ಷಗಳ ಹಿಂದೆ ಸೈನಾ ನೆಹ್ವಾಲ್ ತೈಪೆ ಓಪನ್ ಚಾಂಪಿಯನ್ ಆಗಿದ್ದರು.

ಫೈನಲ್ ನಲ್ಲಿ ಪ್ರಾಬಲ್ಯ:

ತನ್ವಿ ಅತ್ಯುತ್ತಮ ಆರಂಭ ಪಡೆದಿದ್ದು, ಮೊದಲ ಗೇಮ್ನಲ್ಲಿ ತಕ್ಷಣವೇ 10-2ರಿಂದ ಮುನ್ನಡೆ ಪಡೆದರು. ಆದರೆ ಕೆಲವು ಅನಗತ್ಯ ತಪ್ಪುಗಳು ವಿಯೆಟ್ನಾಂನ ಆಟಗಾರ್ತಿ ಮರು ಹೋರಾಡಲು ಅವಕಾಶ ನೀಡಿತು. ಸ್ಪರ್ಧೆಯ ವಿರಾಮದ ನಂತರ ತನ್ವಿ ಮತ್ತೆ ಹಿಡಿತ ಸಾಧಿಸಿ ಮೊದಲ ಗೇಮ್ ಅನ್ನು 21-16ರಿಂದ ಗೆದ್ದುಕೊಂಡರು.

ವಿಯೆಟ್ನಾಂ ಆಟಗಾರ್ತಿ ಎರಡನೇ ಗೇಮ್ನಲ್ಲಿ 3-0 ಮುನ್ನಡೆ ಪಡೆದು ಉತ್ತಮ ಆರಂಭ ಪಡೆದರು.3-3ರಿಂದ ಸಮಬಲಗೊಳಿಸಿದ ತನ್ವಿ ಮರು ಹೋರಾಟ ನೀಡಿದರು. ಭಾರತೀಯ ಆಟಗಾರ್ತಿ ಕ್ರಮೇಣ 15-10ಕ್ಕೆ ಮುನ್ನಡೆ ವಿಸ್ತರಿಸಿದರು. ಏಳು ಮ್ಯಾಚ್ ಪಾಯಿಂಟ್ಸ್ ಪಡೆದ ತನ್ವಿ 21-16ರಿಂದ ಜಯ ಸಾಧಿಸಿ ತನ್ನ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿ ಗೆದ್ದುಕೊಂಡರು.

ಎಳೆಯ ವಯಸ್ಸಿನಲ್ಲಿ ಮತ್ತೊಂದು ಮೈಲಿಗಲ್ಲು:

17 ವರ್ಷ, 222 ದಿನಗಳ ವಯಸ್ಸಿನ ತನ್ವಿ ಅವರು ತೈಪೆ ಓಪನ್ ಇತಿಹಾಸದಲ್ಲಿ ಫೈನಲ್ಗೆ ತಲುಪಿದ ಕಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದಾರೆ. ಕೊರಿಯಾದ ಡಬಲ್ಸ್ ಲೆಜೆಂಡ್ ಲೀ ಯಾಂಗ್ ದಾಖಲೆಯನ್ನು ಮುರಿದರು. ಯಾಂಗ್ 2006ರಲ್ಲಿ ತನ್ನ 17 ವರ್ಷ, 287 ದಿನಗಳ ವಯಸ್ಸಿನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದರು.

ತನ್ವಿ ಕಳೆದೆರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವ ಜೂನಿಯರ್ ಚಾಂಪಿಯನ್ಶಿಪ್ವೊಂದರಲ್ಲಿ ಎರಡು ಪದಕಗಳನ್ನು ಜಯಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ. ತನ್ವಿ ಅವರು ಬಾಲಕಿಯರ ಸಿಂಗಲ್ಸ್ನಲ್ಲಿ ಬೆಳ್ಳಿ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು.

ಏಶ್ಯನ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಮೊತ್ತ ಮೊದಲ ಬಾರಿ ಚಿನ್ನದ ಪದಕ ಜಯಿಸಿದ್ದ ಭಾರತೀಯ ತಂಡದ ಭಾಗವಾಗಿದ್ದರು.

ವಿಶ್ವದ ಮಾಜಿ ಜೂನಿಯರ್ ನಂ.1 ಆಟಗಾರ್ತಿ ತನ್ವಿ ಅವರು 2025ರ ಯು.ಎಸ್. ಓಪನ್ ಸೂಪರ್ 300 ಟೂರ್ನಿಯಲ್ಲಿ, ಒಡಿಶಾ ಮಾಸ್ಟರ್ಸ್ ಸೂಪರ್ 100 ಹಾಗೂ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಟೂರ್ನಿಗಳಲ್ಲಿ ರನ್ನರ್ ಅಪ್ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News