ಆಸ್ಪತ್ರೆಯ ಬೆಡ್‌ನಿಂದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ತನಕ ಜೈಸ್ಮಿನ್ ಯಶೋಗಾಥೆ

Update: 2026-08-01 20:47 IST

 ಜೈಸ್ಮಿನ್ ಲ್ಯಾಂಬೋರಿಯಾ | Photo Credit : X 

ಹೊಸದಿಲ್ಲಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು ಕೆಲವೇ ವಾರಗಳು ಬಾಕಿ ಇರುವ ತನಕ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದ ಜೈಸ್ಮಿನ್ ಲ್ಯಾಂಬೋರಿಯಾ ಇದೀಗ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್ ಜೈಸ್ಮೀನ್ ಗ್ಲಾಸ್ಗೊ ಗೇಮ್ಸ್‌ಗೆ ಕೆಲವೇ ದಿನಗಳು ಬಾಕಿ ಇರುವ ತನಕ ಅನಾರೋಗ್ಯದಿಂದಾಗಿ ಅಸ್ಪತ್ರೆಯಲ್ಲಿದ್ದರು. ಹೀಗಾಗಿ ಅವರ ಗೇಮ್ಸ್ ಪೂರ್ವ ತಯಾರಿಗೆ ತೀವ್ರ ಹಿನ್ನಡೆಯಾಗಿತ್ತು. ಆದರೆ ಶನಿವಾರ 24ರ ವಯಸ್ಸಿನ ಭಿವಾನಿಯ ಬಾಕ್ಸರ್ ಹಾಲಿ ಚಾಂಪಿಯನ್ ಮೈಕೆಲಾ ವಾಲ್ಶ್‌ರನ್ನು ಮಣಿಸಿ ಚಿನ್ನಕ್ಕೆ ಮುತ್ತಿಟ್ಟರು.

ಜೈಸ್ಮಿನ್ ಪಾಲಿಗೆ ಇದು ಮತ್ತೊಂದು ಪದಕವಲ್ಲ, ಇದು ಅವರು ತಿಂಗಳುಗಳ ಕಾಲ ಅನುಭವಿಸಿದ ನೋವು, ಅನಿಶ್ಚಿತತೆ ಹಾಗೂ ಪರಿಶ್ರಮಕ್ಕೆ ಸಂದ ಪ್ರತಿಫಲವಾಗಿದೆ.

ಜೈಸ್ಮಿನ್ ಮಾರ್ಚ್‌ನಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್‌ಶಿಪ್ ವೇಳೆ ಸಮಸ್ಯೆ ಎದುರಿಸಿದ್ದರು. ಆಗ ಅವರು ತೀವ್ರ ಜ್ವರವಿದ್ದರೂ ಬಾಕ್ಸಿಂಗ್ ರಿಂಗ್‌ಗೆ ಇಳಿದಿದ್ದರು. ಅಂತಿಮವಾಗಿ ಫೈನಲ್‌ಗೆ ತಲುಪಿದರು. ಬೆಳ್ಳಿ ಪದಕ ಜಯಿಸಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದರು.

ಫೈನಲ್ ವೇಳೆ ಜೈಸ್ವಿನ್ ತಲೆಗೆ ಹೊಡೆತ ಬಿದ್ದಿತ್ತು. ವೈದ್ಯರು ಸ್ಕ್ಯಾನಿಂಗ್ ನಡೆಸಿ ಏನೂ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಭಾರತಕ್ಕೆ ಮರಳಿದ ನಂತರ 20 ದಿನಗಳ ಕಾಲ ತರಬೇತಿ ನಡೆಸಿದ್ದರು. ಮತ್ತೊಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ಜ್ವರಕ್ಕೆ ಸಾಕಷ್ಟು ಔಷಧಿ ಸ್ವೀಕರಿಸಿದರು. ಆಸ್ಪತ್ರೆಗೆ ದಾಖಲಾಗಿದ್ದರು.

‘‘ನನ್ನ ಅನಾರೋಗ್ಯಕ್ಕೆ ಕಾರಣ ಏನೆಂದು ಗೊತ್ತಿರಲಿಲ್ಲ. ಆ ನಂತರ ನಾನು ಚೇತರಿಸಿಕೊಂಡೆ. ಅನಾರೋಗ್ಯದಿಂದಾಗಿ ಜೂನ್‌ನಲ್ಲಿ ಝೆಕ್ ಗಣರಾಜ್ಯದಲ್ಲಿ ನಡೆದಿದ್ದ ತರಬೇತಿ ಶಿಬಿರದಿಂದ ಹೊರಗುಳಿದಿದ್ದೆ . ಫಲಿತಾಂಶದ ಬಗ್ಗೆ ಚಿಂತಿಸದಂತೆ ಕೋಚ್‌ಗಳು ಸಲಹೆ ನೀಡಿದ್ದರು. ನನ್ನಲ್ಲಿ ನಕಾರಾತ್ಮಕ ಯೋಚನೆಗಳು ಇರಲಿಲ್ಲ. ತಂಡದ ಬೆಂಬಲ ಹಾಗೂ ಕ್ರೀಡಾ ಮನೋವೈದ್ಯರ ಸಹಾಯದಿಂದ ಆತ್ಮವಿಶ್ವಾಸ ಗಳಿಸಿದೆ. ಗೇಮ್ಸ್ ಆರಂಭವಾಗಲು ಒಂದು ತಿಂಗಳು ಇರುವಾಗ ಜುಲೈ 1ರಂದು ತರಬೇತಿ ಪುನರಾರಂಭಿಸಿದ್ದೆ ’’ ಎಂದು ಜೈಸ್ಮಿನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News