Photo Credit : PTI 

ಹೊಸದಿಲ್ಲಿ: ಭಾರತದ ಅಗ್ರ ರ್ಯಾಂಕಿನ ಡಬಲ್ಸ್ ಆಟಗಾರ ಯೂಕಿ ಭಾಂಬ್ರಿ ಅಮೆರಿಕದ ರಯಾನ್ ಸೆಗೆರ್‌ಮ್ಯಾನ್ ಜೊತೆಗೂಡಿ ಅಲ್ಮಾಟಿ ಓಪನ್ ಪ್ರಶಸ್ತಿ ಜಯಿಸಿದರು. ಈ ಮೂಲಕ 2026ರ ಋತುವಿನಲ್ಲಿ ತನ್ನ ಮೊದಲ ಎಟಿಪಿ ಟೂರ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.

ರವಿವಾರ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಇಂಡೋ-ಅಮೆರಿಕ ಜೋಡಿ ಅಗ್ರ ಶ್ರೇಯಾಂಕದ ಆಸ್ಟ್ರೀಯದ ಲುಕಾಸ್ ಮಿಡ್ಲರ್ ಹಾಗೂ ನೀಲ್ ಒಬರ್ಲೀಟ್ನರ್‌ರನ್ನು 7-6(3), 6-7(1), 10-2 ಅಂತರದಿಂದ ಮಣಿಸಿದರು. ಇದರೊಂದಿಗೆ ಎಟಿಪಿ 250 ಪ್ರಶಸ್ತಿಯನ್ನು ಜಯಿಸಿದರು. ಭಾಂಬ್ರಿ ಎಟಿಪಿ ಟೂರ್‌ನಲ್ಲಿ ತನ್ನ ವೃತ್ತಿಜೀವನದ ಐದನೇ ಡಬಲ್ಸ್ ಪ್ರಶಸ್ತಿ ಜಯಿಸಿದರು.

ಭಾಂಬ್ರಿ ಈ ಹಿಂದೆ 2023ರಲ್ಲಿ ಮಲ್ಲೋರ್ಕಾದಲ್ಲಿ ಎಟಿಪಿ 250 ಟೂರ್ನಮೆಂಟ್ ಹಾಗೂ 2024ರಲ್ಲಿ ಗಸ್ಟಾಡ್ ಹಾಗೂ ಮ್ಯೂನಿಕ್‌ನಲ್ಲಿ, 2025ರಲ್ಲಿ ದುಬೈನಲ್ಲಿ ಎಟಿಪಿ 500 ಟ್ರೋಫಿಯನ್ನು ಗೆದ್ದಿದ್ದರು.

ಜಪಾನ್‌ನಲ್ಲಿ ಇತ್ತೀಚೆಗೆ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲದೆ ನಿರಾಶೆ ಮೂಡಿಸಿದ್ದ 34ರ ಹರೆಯದ ಬಾಂಭ್ರಿ ರವಿವಾರ ಪ್ರಶಸ್ತಿ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.

ಭಾಂಬ್ರಿ ಈ ಋತುವಿನಲ್ಲಿ ಗೆದ್ದಿರುವ ಎರಡನೇ ಎಟಿಪಿ ಫೈನಲ್ ಪಂದ್ಯ ಇದಾಗಿದೆ. ಈ ವರ್ಷಾರಂಭದಲ್ಲಿ ನ್ಯೂಝಿಲ್ಯಾಂಡ್‌ನ ಮೈಕಲ್ ವೀನಸ್ ಜೊತೆಗೂಡಿ ಎಟಿಪಿ 250 ಜಿನೇವಾ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.

ಫೆಬ್ರವರಿಯಲ್ಲಿ ಜೀವನಶ್ರೇಷ್ಠ ರ್ಯಾಂಕ್(18) ತಲುಪಿದ್ದ ಭಾಂಬ್ರಿ ಕ್ರಮೇಣ ಟಾಪ್-40ಕ್ಕೆ ಕುಸಿದಿದ್ದಾರೆ.

ಬಾಂಭ್ರಿ ಅವರ 2026ರ ಗ್ರ್ಯಾನ್‌ಸ್ಲಾಮ್ ಅಭಿಯಾನವು ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಮೂರನೇ ಸುತ್ತಿನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಕೊನೆಗೊಂಡಿದೆ. ವಿಂಬಲ್ಡನ್ ಹಾಗೂ ಯುಎಸ್ ಓಪನ್‌ನಲ್ಲಿ ವೀನಸ್ ಜೊತೆಗೂಡಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸುವ ಮೊದಲು ಫ್ರೆಂಚ್ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತಿದ್ದರು.

2025ರಲ್ಲಿ ಭಾಂಬ್ರಿ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದರು. ಆಗ ಭಾಂಬ್ರಿ ಹಾಗೂ ವೀನಸ್ ಯು.ಎಸ್. ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಅದೇ ವರ್ಷ ಪ್ರತಿಷ್ಠಿತ ಎಟಿಪಿ 500 ಪ್ರಶಸ್ತಿಯನ್ನು ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ಜೊತೆಗೂಡಿ ಗೆದ್ದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor