T20 ಕ್ರಿಕೆಟ್ ನಲ್ಲಿ ಪವರ್ ಪ್ಲೇನಲ್ಲಿ 100 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಅಭಿಷೇಕ್ ಶರ್ಮಾ; ಐತಿಹಾಸಿಕ ಸಾಧನೆ
ಅಭಿಷೇಕ್ ಶರ್ಮಾ | Photo Credit : PTI
ಕ್ರೈಸ್ಟ್‌ಚರ್ಚ್, ಅ.24: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ (1ರಿಂದ 6ನೇ ಓವರ್‌ವರೆಗೆ) 100 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಅಭಿಷೇಕ್ ಈ ಸಾಧನೆ ಮಾಡಿದರು.
ಭಾರತ ತಂಡ ರನ್ ಚೇಸ್ ಮಾಡುತ್ತಿದ್ದಾಗ ಮ್ಯಾಟ್ ಹೆನ್ರಿ ಎಸೆದ ಮೂರನೇ ಓವರ್‌ನಲ್ಲಿ ಎಕ್ಸ್‌ಟ್ರಾ ಕವರ್ ದಿಕ್ಕಿನಲ್ಲಿ ಸಿಕ್ಸರ್ ಸಿಡಿಸಿದ ಅಭಿಷೇಕ್ ಈ ಮೈಲಿಗಲ್ಲು ತಲುಪಿದರು. ಈ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ರೋಹಿತ್ ತಮ್ಮ ಟಿ-20 ವೃತ್ತಿಜೀವನದಲ್ಲಿ ಆರಂಭಿಕ ಆಟಗಾರನಾಗಿ ಪವರ್‌ಪ್ಲೇನಲ್ಲಿ ಒಟ್ಟು 98 ಸಿಕ್ಸರ್‌ಗಳನ್ನು ಸಿಡಿಸಿದ್ದರು.
2024ರಲ್ಲಿ ಟಿ-20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಅಭಿಷೇಕ್ ಭಾರತದ ಪ್ರಮುಖ ಸಿಕ್ಸರ್ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಪೂರ್ಣ ಸದಸ್ಯ ರಾಷ್ಟ್ರಗಳ ಬ್ಯಾಟರ್‌ಗಳ ಪೈಕಿ ಅತ್ಯಂತ ವೇಗವಾಗಿ ಟಿ-20 ಶತಕ ಗಳಿಸಿದ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
ಆದರೆ, ಶನಿವಾರದ ಪಂದ್ಯದಲ್ಲಿ ತಮ್ಮ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಅವರು ವಿಫಲರಾದರು. 21 ಎಸೆತಗಳಲ್ಲಿ 27 ರನ್ ಗಳಿಸಿದ ಅಭಿಷೇಕ್, ಒಂಬತ್ತನೇ ಓವರ್‌ನಲ್ಲಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ಟಿ-20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು
100 — ಅಭಿಷೇಕ್ ಶರ್ಮಾ
98 — ರೋಹಿತ್ ಶರ್ಮಾ
97 — ಮಾರ್ಟಿನ್ ಗಪ್ಟಿಲ್
94 — ಪೌಲ್ ಸ್ಟಿರ್ಲಿಂಗ್
87 — ಕ್ವಿಂಟನ್ ಡಿ ಕಾಕ್
ಭುವನೇಶ್ವರ್ ದಾಖಲೆ ಮುರಿದ ಅರ್ಷದೀಪ್ ಸಿಂಗ್
ಹೊಸದಿಲ್ಲಿ, ಅ.24: ಭಾರತ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಟಿ-20 ಕ್ರಿಕೆಟ್‌ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಎಡಗೈ ವೇಗಿ ಅರ್ಷದೀಪ್, ಕಿವೀಸ್ ವಿರುದ್ಧ 33 ರನ್ ನೀಡಿ ಎರಡು ವಿಕೆಟ್ ಪಡೆದರು. ಇದರೊಂದಿಗೆ 2026ರಲ್ಲಿ ಅವರ ವಿಕೆಟ್‌ಗಳ ಸಂಖ್ಯೆ 38ಕ್ಕೆ ಏರಿತು. 2022ರಲ್ಲಿ 37 ವಿಕೆಟ್ ಪಡೆದಿದ್ದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಅರ್ಷದೀಪ್ ಮುರಿದರು.
ಅರ್ಷದೀಪ್ ಕೇವಲ 26 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಭುವನೇಶ್ವರ್ 2022ರಲ್ಲಿ 31 ಇನಿಂಗ್ಸ್‌ಗಳಲ್ಲಿ 37 ವಿಕೆಟ್ ಪಡೆದಿದ್ದರು.
ನಾಲ್ಕು ವರ್ಷಗಳ ಬಳಿಕ ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಮರಳಿರುವ ಹಿರಿಯ ವೇಗಿ ಭುವನೇಶ್ವರ್, ಈ ದಾಖಲೆಯನ್ನು ಸುಮಾರು ನಾಲ್ಕು ವರ್ಷಗಳ ಕಾಲ ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದರು.
ಎಲೈಟ್ ಕ್ಲಬ್‌ಗೆ ಸೇರ್ಪಡೆ
ಈ ಸಾಧನೆಯೊಂದಿಗೆ ಅರ್ಷದೀಪ್, ಕ್ಯಾಲೆಂಡರ್ ವರ್ಷವೊಂದರಲ್ಲಿ ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳ ಬೌಲರ್‌ಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿಗೆ ಸೇರಿದ್ದಾರೆ.
ಐರ್ಲೆಂಡ್‌ನ ಜೋಶ್ ಲಿಟ್ಲ್ 2022ರಲ್ಲಿ 39 ವಿಕೆಟ್ ಪಡೆದಿದ್ದರೆ, ಶ್ರೀಲಂಕಾದ ವನಿಂದು ಹಸರಂಗ 2024ರಲ್ಲಿ 38 ವಿಕೆಟ್ ಉರುಳಿಸಿದ್ದರು. ಅರ್ಷದೀಪ್ ಇದೀಗ ಹಸರಂಗ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಲಿಟ್ಲ್ ಅವರ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ವಿಕೆಟ್ ಪಡೆಯಬೇಕಿದೆ.
27 ವರ್ಷದ ಅರ್ಷದೀಪ್ ಸಿಂಗ್ ಈ ಹಿಂದೆ 2022ರಲ್ಲಿ 33 ಹಾಗೂ 2024ರಲ್ಲಿ 36 ವಿಕೆಟ್ ಪಡೆದಿದ್ದರು. ವರುಣ್ ಚಕ್ರವರ್ತಿ ಕೂಡ 2025ರಲ್ಲಿ 36 ವಿಕೆಟ್ ಉರುಳಿಸಿದ್ದರು. ಅಕ್ಷರ್ ಪಟೇಲ್ 2026ರಲ್ಲಿ 32 ವಿಕೆಟ್ ಪಡೆದಿದ್ದಾರೆ.
ಟಿ-20 ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳು
ವಿಕೆಟ್‌ಗಳು ಆಟಗಾರ ತಂಡ ವರ್ಷ
39 ಜೋಶ್ ಲಿಟ್ಲ್ ಐರ್ಲೆಂಡ್ 2022
38 ವನಿಂದು ಹಸರಂಗ ಶ್ರೀಲಂಕಾ 2024
38 ಅರ್ಷದೀಪ್ ಸಿಂಗ್ ಭಾರತ 2026
37 ಭುವನೇಶ್ವರ್ ಕುಮಾರ್ ಭಾರತ 2022
ಟಿ-20 ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರು
ವಿಕೆಟ್‌ಗಳು ಆಟಗಾರ ವರ್ಷ
38 ಅರ್ಷದೀಪ್ ಸಿಂಗ್ 2026
37 ಭುವನೇಶ್ವರ್ ಕುಮಾರ್ 2022
36 ಅರ್ಷದೀಪ್ ಸಿಂಗ್ 2024
36 ವರುಣ್ ಚಕ್ರವರ್ತಿ 2025
33 ಅರ್ಷದೀಪ್ ಸಿಂಗ್ 2022
32 ಅಕ್ಷರ್ ಪಟೇಲ್ 2026