×
Ad

ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ

Update: 2026-06-01 19:44 IST

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳು ಹಾಗೂ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂ.18ರಂದು ನಡೆಯಲಿರುವ ಚುನಾವಣೆಗೆ ಸೋಮವಾರ ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅಧಿಸೂಚನೆ ಹೊರಡಿಸಿದ್ದಾರೆ.

ಜೂ.8ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಜೂ.9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.11ಕ್ಕೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಜೂ.18ರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಮತಗಳ ಎಣಿಕೆ ನಡೆಸಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಜೂ.8ರ ವರೆಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅಥವಾ ಸಹಾಯಕ ಚುನಾವಣಾಧಿಕಾರಿ ಬಿ.ಎಸ್. ಮಹಾಲಿಂಗೇಶ್ ಅವರಿಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಜೂ.7ರಂದು ರವಿವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಆ ದಿನಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಾಖಲೆಗಳನ್ನು ನಿಗದಿತ ನಮೂನೆ 2ಸಿಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಠ 10 ಜನ ಹಾಲಿ ಚುನಾಯಿತ ವಿಧಾನಸಭಾ ಸದಸ್ಯರು ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ 5 ಸಾವಿರ ರೂ.ಗಳನ್ನು ಹಾಗೂ ಇತರ ಅಭ್ಯರ್ಥಿಗಳು 10 ಸಾವಿರ ರೂ.ಗಳನ್ನು ಠೇವಣಿ ಇಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News