×
Ad

ನನ್ನ ನಕಲಿ ಆಡಿಯೋ ವೈರಲ್, ಇದೊಂದು ರಾಜಕೀಯ ಷಡ್ಯಂತ್ರ: ಝಮೀರ್ ಅಹ್ಮದ್

"ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ"

Update: 2026-06-01 14:48 IST

ಬೆಂಗಳೂರು : ʼಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆʼ ಎಂದು ಝಮೀರ್ ಅಹ್ಮದ್‌ ಖಾನ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ʼಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿದ್ದಾರೆ.

ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ.. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ,ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ನಡೆದಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹತ್ತು ಜನರಿಗೆ ಸಂಪುಟದಲ್ಲಿ ಆರಂಭಿಕ ಅವಕಾಶ ಸಿಗಲಿದೆ. ಝಮೀರ್ ಅಹ್ಮದ್ ಖಾನ್ ಕೂಡಾ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ಈ ಎಲ್ಲಾ ಬೆಳವಣಿಗೆ ನಂತರದಲ್ಲಿ ಇದೀಗ ಝಮೀರ್ ಅವರದ್ದು ಎನ್ನಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಕ್ಸ್‌ನಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡರೊಬ್ಬರ ಜೊತೆ ಝಮೀರ್ ಅಹ್ಮದ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ.

ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ ಎನ್ನಲಾಗಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News