×
Ad

ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಎಲ್ಲ ಜಿಲ್ಲೆಗಳಲ್ಲಿ ಧರಣಿ ನಡೆಸಲು ಹೋರಾಟ ಸಮಿತಿ ತೀರ್ಮಾನ

Update: 2025-08-23 21:00 IST

ಬೆಂಗಳೂರು, ಆ.23 : ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗಾಗಿ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಧರಣಿ ಮುಂದುವರಿದಿದ್ದು, ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಧರಣಿ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ.

ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ವಿಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆ ವಿಫಲವಾದ ಬೆನ್ನಲ್ಲೇ, ಧರಣಿ ಸ್ಥಳದಲ್ಲಿ ಸಭೆ ಸೇರಿದ ಹೋರಾಟಗಾರರು ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿದರು.

ಈ ವೇಳೆ ‘ವಾರ್ತಾಭಾರತಿ’ಯೊಂದಿಗೆ ಹೋರಾಟಗಾರ ಬಸವರಾಜ್ ಕೌತಾಳ್ ಮಾತನಾಡಿ, ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ವಿಚಾರದಲ್ಲಿ ರಾಜಕೀಯ ತೀರ್ಮಾನವಾಗಿದೆ. ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುವುದು ನನ್ನ ಜವಾಬ್ದಾರಿಯಾದರೂ 101 ಪರಿಶಿಷ್ಟ ಜಾತಿಯನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ. ಸರಕಾರ ಎಲ್ಲ ಸಚಿವರ ಅಭಿಪ್ರಾಯದೊಂದಿಗೆ ಒಳಮೀಸಲಾತಿ ಜಾರಿ ಮಾಡಲಾಗಿದೆ. ಸದ್ಯಕ್ಕೆ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ಜಾರಿ ಮಾಡುವುದು ಕಷ್ಟ. ನನಗೆ ಕಾಲಾವಕಾಶ ಕೊಡಿ, ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಲು ಏನು ಮಾಡಬೇಕು ಎನ್ನುವುದನ್ನು ಸಚಿವ ಸಂಪುಟದ ಮುಂದಿಡುತ್ತೇನೆ ಎನ್ನುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿಸಿದರು.

ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಏನೇನು ಕೆಲಸ ಮಾಡಬೇಕೋ ಅದನ್ನು ಮಾಡಲಾಗುವುದು. ಉನ್ನತ ಶಿಕ್ಷಣ, ಉದ್ಯೋಗದ ವಿಚಾರದಲ್ಲಿ ನಿಗಮ ಮಂಡಳಿ ಸ್ಥಾಪನೆ ಮಾಡಿ 49 ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾದ ಪ್ಯಾಕೇಜ್ ನೀಡಲಾಗುವುದು. ಉದ್ಯೋಗದ ವಿಚಾರದಲ್ಲಿ ಅಲೆಮಾರಿಗಳಿಗೆ ನೇರ ನೇಮಕಾತಿ ಮಾಡಬಹುದಾ? ಎನ್ನುವುದನ್ನು ಚಿಂತನೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಬಸವರಾಜ್ ಕೌತಾಳ್ ತಿಳಿಸಿದರು.

ಪರಿಶಿಷ್ಟ ಜಾತಿಗಳ ಆಯೋಗ ರಚನೆ ಮಾಡಿದ ನಂತರ ಆಯೋಗಕ್ಕೆ ಮೀಸಲಾತಿ ಹಂಚಿಕೆಯ ಅಧಿಕಾರ ನೀಡಲಾಗುವುದು. ಅಲ್ಲಿಂದ ಅಲೆಮಾರಿಗಳಿಗೆ ಆಗ ಶೇ.1ರಷ್ಟು ಮೀಸಲಾತಿ ಮಾಡಿಸೋಣ ಎಂಬುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

‘ಕನಿಷ್ಟ ಒಂದು ತಿಂಗಳು ಧರಣಿ ನಡೆಸುತ್ತೇವೆ. ರಾಜ್ಯ ಸರಕಾರದ ನಡೆ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಿಕ್ಕ ಸಂತೋಷದಲ್ಲಿ ನಾವು ಇಲ್ಲ. ಅಲೆಮಾರಿಗಳ ಹೋರಾಟವನ್ನು ನಾವು ಮುಂದುವರಿಸುತ್ತೇವೆ’

-ಬಸವರಾಜ್ ಕೌತಾಳ್, ಹೋರಾಟಗಾರ

‘ಹೈದರಾಬಾದ್ ಕರ್ನಾಟಕ 370ಜೆ, ಒಳಮೀಸಲಾತಿ ಎಲ್ಲವೂ ಸಂವಿಧಾನದ ಮೂಲಕ ಜಾರಿಯಾಗಿದೆ. ಸುಪ್ರೀಂ ಕೋರ್ಟ್‍ನ ತೀರ್ಪು ಸತ್ತಿಲ್ಲ. ಅದನ್ನು ಇಟ್ಟುಕೊಂಡು ಕಾನೂನು ಹೋರಾಟವನ್ನು ಮಾಡಲಾಗುವುದು. ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನಮಗೆ ಸಿಗುತ್ತದೆ. ನಮ್ಮ ಪರವಾಗಿ ಆಂಧ್ರಪ್ರದೇಶದ ಮಾನವ ಹಕ್ಕುಗಳ ಹೋರಾಟಗಾರರಾದ ಪ್ರೊ.ಹರಗೋಪಾಲ್ ನಮ್ಮ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ’

-ಅಂಬಣ್ಣ ಅರೋಲಿಕರ್, ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News