ಬೆಂಗಳೂರು : ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಮುಷ್ಕರಕ್ಕೆ ನಾನಾಗಲಿ, ಸರಕಾರವಾಗಲಿ ಮಣಿಯುವ ಪ್ರಶ್ನೆಯೇ ಇಲ್ಲ. ನಾವು ಅವರ ಬಳಿ ಡಿಸೆಂಬರ್ ವರೆಗೆ ಕಾಲಾವಕಾಶ ಕೇಳಿದ್ದೇವೆ. ಎರಡು ತಿಂಗಳಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ ಪುನರ್ ರಚಿಸುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಮಂಗಳವಾರ ನಗರದ ಮೌಲಾನಾ ಆಝಾದ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಿಂದಲೂ ಒಂದಲ್ಲ ಕಾರಣಕ್ಕೆ ಈ ವ್ಯವಸ್ಥೆ ಹಳಿ ತಪ್ಪುತ್ತಲೆ ಬಂದಿದೆ. ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಹೊಸ ಟೆಂಡರ್ ನೀತಿ, ನಿಯಮಗಳನ್ನು ಜಾರಿಗೆ ತರಬೇಕಿದೆ ಎಂದು ಹೇಳಿದರು.

ಜನಸಾಮಾನ್ಯರು 108 ಆ್ಯಂಬುಲೆನ್ಸ್ ಮೇಲೆ ಅವಲಂಬಿತರಾಗಬೇಡಿ. ನಾನೇ ಕರೆ ಮಾಡಿ ಕರೆದರು ಆ್ಯಂಬುಲೆನ್ಸ್ ಬರಲು 50 ನಿಮಿಷವಾಗುತ್ತದೆ. ಇವರ ಬ್ಲಾಕ್‍ಮೇಲ್ ತಂತ್ರದಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗೆ ಸೀಮಿತವಾಗಿ ಈ ಆರೋಗ್ಯ ಕವಚ ಯೋಜನೆಯನ್ನು ನಾನು ಆರೋಗ್ಯ ಸಚಿವನಾದ ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ ಎಂದು ಅವರು ಹೇಳಿದರು.

735 ಆ್ಯಂಬುಲೆನ್ಸ್‌ ಗಳು ಇದ್ದವು. ಈಗ 400 ಚಿಲ್ಲರೆ ಆ್ಯಂಬುಲೆನ್ಸ್‌ ಗಳು ಮಾತ್ರ ಇದೆ. ಸರಕಾರಿ ಆಸ್ಪತ್ರೆಗಳಲ್ಲಿ 1000 ಆ್ಯಂಬುಲೆನ್ಸ್‌ ಗಳು ಇವೆ. ಜನರು ಅದರ ಸೇವೆ ಪಡೆದುಕೊಳ್ಳಲಿ. 108 ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ಮಾಡಿದರೆ ನಾನೇನು ಮಾಡಲಿ. ಅವರು ಜಿವಿಕೆ ಸಂಸ್ಥೆಯ ಸಿಬ್ಬಂದಿಗಳು. ನಮ್ಮ ರೋಗಿಗಳಿಗೆ ತೊಂದರೆ ಯಾದರೆ ನಾವು ಜಿವಿಕೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

 

‘ಸಿಎಂಗೆ ರಾಹುಲ್ ಗಾಂಧಿ ಅವಮಾನ ಮಾಡಿಲ್ಲ. ನಮ್ಮ ಮುಖ್ಯಮಂತ್ರಿಗೆ ಹೈಕಮಾಂಡ್, ರಾಹುಲ್ ಗಾಂಧಿ ಹೆಚ್ಚು ಗೌರವ ಕೊಡುತ್ತಾರೆ. ಅವಮಾನ ಮಾಡುವಂತಹ ಪ್ರಶ್ನೆ ಇಲ್ಲ. ಜನಜಂಗುಳಿಯಲ್ಲಿ ತಳ್ಳಾಟ ಆಗಿರಬಹುದು. ಅದನ್ನು ಅವಮಾನ ಎಂದು ಭಾವಿಸಬಾರದು. ಕಡು ಬಡವರನ್ನು ಗೌರವದಿಂದ ಕಾಣುವ ವ್ಯಕ್ತಿತ್ವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರದ್ದು. ಅವರ ತಂದೆಯನ್ನು ಕೊಲೆ ಮಾಡಿದಂತಹ ಆರೋಪಿಗಳ ಜೊತೆಯೂ ಗೌರವಯುತವಾಗಿ ಮಾತನಾಡುವ ವ್ಯಕ್ತಿತ್ವ ಅವರದ್ದು’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor