ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರದ ವೀಡಿಯೊ ಪ್ರಕರಣ; ಇಬ್ಬರು ಪೊಲೀಸ್ ವಶಕ್ಕೆ
ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರದ ವೀಡಿಯೊ ಪ್ರಸಾರ ಮಾಡಿದ ಆರೋಪದಲ್ಲಿ ಇಬ್ಬರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
Karnataka honeytrap ಎನ್ನುವ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೊ ಒಂದನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಉಲ್ಲೇಖ ಆಗಿತ್ತು. ಈ ಹಿನ್ನಲೆ ಸಿದ್ದರಾಮಯ್ಯ ಯಾವುದೇ ರೀತಿಯ ವೀಡಿಯೊ ಪ್ರಸಾರ ಮಾಡಬಾರದು ಎಂದು ಕೋರ್ಟ್ ಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ನೀಡಿದ್ದರು.
ಸಿದ್ದರಾಮಯ್ಯ ಅವರ ದೂರು ಅಧರಿಸಿ ಎಫ್‌ಐಆರ್ ದಾಖಲಿಸಿರುವ ಬೆಂಗಳೂರು ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಇಬ್ಬರೇ Karnataka honeytrap ಯೂಟ್ಯೂಬ್ ಚಾನಲ್ ಗೆ ವೀಡಿಯೊ ಅಪ್ಲೋಡ್ ಮಾಡಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ ಇವರಿಗೆ ಆ ವೀಡಿಯೊ ಕೊಟ್ಟವರು ಯಾರು? ಅಸಲಿಗೆ ಆ ವೀಡಿಯೊ ಆಗಿದ್ದು ಯಾವಾಗ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆದರೆ ಪೊಲೀಸರ ವಶಕ್ಕೆ ಸಿಕ್ಕಿರುವುದು ಯಾರು ಅವರ ಹಿನ್ನಲೆ ಏನು ಎಂಬುದನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.