ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ-2026 ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ದಸರಾಗೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಅವರು ಅದ್ದೂರಿ ಚಾಲನೆ ನೀಡಿದರು.

ಮೈಸೂರು ಹೊರವಲಯದ ರಿಂಗ್ ರಸ್ತೆಯ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಬಳಿಯ ವಿಶಾಲವಾದ ಮೈದಾನದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯ ಸುಂದರ ಲೈಟಿಂಗ್ಸ್, ಸೌಂಡ್ಸ್ ನೊಂದಿಗೆ ಕಿಕ್ಕಿರಿದು ತುಂಬಿದ್ದ ಯುವ ಸಮುದಾಯ ಕಂಡು ನಟ ಪ್ರಭುದೇವ ಅವರು ಪುಳಕಿತರಾದರು.

ಬಿಳಿ ಪಂಚೆ, ಬಿಳಿ ಶರ್ಟ್‌ನೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ ಪ್ರಭುದೇವ ಅವರಿಗೆ ಯುವ ದಸರಾ ಉಪ ಸಮಿತಿಯವರು ಸಾಂಪ್ರದಾಯಿಕವಾಗಿ ಮೈಸೂರು ಪೇಟ ತೊಡಿಸಿ ಗೌರವಿಸಿದರು.

ಬಳಿಕ ಮಾತನಾಡಿದ ನಟ ಪ್ರಭುದೇವ ಅವರು, ವರ್ಷಗಳ ನಂತರ ಮೈಸೂರು ದಸರಾ ಉತ್ಸವದ ಭಾಗವಾಗುತ್ತಿರುವುದು ನನ್ನ ಪುಣ್ಯ ಮತ್ತು ಅತ್ಯಂತ ಸಂತೋಷ ತಂದಿದೆ. ನನ್ನ ತಾಯಿ ಮತ್ತು ಕುಟುಂಬದವರಿಗೂ ನಾನು ಇಲ್ಲಿಗೆ ಬಂದಿರುವುದು ಹೆಮ್ಮೆ ಮೂಡಿಸಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.

ಸಂಗೀತದ ರಸದೌತಣ: ಮೊದಲ ದಿನವೇ ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಮತ್ತು ಅವರ ತಂಡದಿಂದ ಅದ್ಭುತ ಮ್ಯೂಸಿಕಲ್ ನೈಟ್ಸ್ ನಡೆಯಿತು. 

ಖ್ಯಾತ ಗಾಯಕ ಹೇಮಂತ್, ಅಂಧ್ರದ ಮಂಗಲಿ ಸೇರಿದಂತೆ ಅನೇಕ ಗಾಯಕರು ಸಂಗೀತದ ರಸದೌತಣ ನೀಡಿ ನೆರದಿದ್ದವರಿಗೆ ಮುದ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ವೇಳೆ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ರಘು ಕೌಟಿಲ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ,  ಯುವ ದಸರಾ ಸಮಿತಿ ಅಧ್ಯಕ್ಷ ರಾಯರಹುಂಡಿ ರವಿ,  ಯುವದಸರಾ ಉಪವಿಶೇಷಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾರ್ಯಾಧ್ಯಕ್ಷ ಸತ್ಯಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor