‘ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ’ | 1.20 ಲಕ್ಷ ರೂ.ಆದಾಯ ಮಿತಿ ಹೊಂದಿರುವವರ ಪಿಂಚಣಿ ಮುಂದುವರಿಸಲು ಆದೇಶ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪರಿಶೀಲನೆಯ ನಂತರ 32 ಸಾವಿರ ರೂ.ಗಳಿಂದ 1.20 ಲಕ್ಷ ರೂ. ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್, ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇದುವೇ ಆದಾಯ ಮಿತಿಯಿದ್ದ ಕಾರಣ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಅದನ್ನು 1.20 ಲಕ್ಷ ರೂ.ಗಳಿಗೆ ಏರಿಕೆ ಮಾಡುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ತಿಳಿಸಿದರು.
ವಿವರಣೆ:
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಗಳನ್ನು ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡುಬಂದಿದ್ದು, ಈ ಫಲಾನುಭವಿಗಳ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್ ಆ್ಯಪ್ ಸಿದ್ಧಪಡಿಸಿ ಪರಿಶೀಲನೆ ನಡೆಸಲಾಗಿತ್ತು. ಈ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18,06,032 ಮಂದಿಯ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲೂಕು ತಹಶೀಲ್ದಾರರಿಂದ ನಿಯಮಾನುಸಾರ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ. ಆದರೆ, 23,14,544 ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನೆ ಸಮಯದಲ್ಲಿ ಆದಾಯವು 32 ಸಾವಿರ ರೂ.ಗಳಿಗಿಂತ ಹೆಚ್ಚಿರುವುದು ಕಂಡುಬಂದಿದೆ.
23,14,544 ಮಂದಿಯ ಪೈಕಿ 32 ಸಾವಿರ ರೂ.ಗಳಿಗಿಂತ ಹೆಚ್ಚು ಹಾಗೂ 1.20 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವಂತಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರೆಸುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚಿಸಿದ್ದರು.
ಅದರಂತೆ 23,14,544 ಮಂದಿಯ ಪೈಕಿ ಪರಿಶೀಲನೆಯ ನಂತರ 32 ಸಾವಿರ ರೂ.ಗಳಿಗಿಂತ ಹೆಚ್ಚು ಹಾಗೂ 1.20 ಲಕ್ಷ ರೂ. ಒಳಗಿನ ವಾರ್ಷಿಕ ಆದಾಯ ಮಿತಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರಿಸಲು ಕಂದಾಯ ಇಲಾಖೆಯು ಆದೇಶಿಸಿದೆ.