ರಾಜ್ಯದಲ್ಲಿ 32,51,707 ಎಕರೆ ಸರಕಾರಿ ಭೂಮಿ ವಿಸ್ತೀರ್ಣ: ಡಿಸಿಎಂ ಡಾ. ಜಿ. ಪರಮೇಶ್ವರ್

Update: 2026-08-19 23:15 IST

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಅರಣ್ಯ, ಕೃಷಿ ಭೂಮಿ ಹೊರತುಪಡಿಸಿ 32,51,707 ಎಕರೆ ಸರಕಾರಿ ಭೂಮಿ ವಿಸ್ತೀರ್ಣವಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬುಧವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, 2010ರಿಂದ 2026ರವರೆಗೆ ಖಾಸಗಿ ಸಂಘ-ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಖಾಸಗಿ ಸಂಘ-ಸಂಸ್ಥೆಗಳಿಗೆ, ಟ್ರಸ್ಟ್ ಗಳಿಗೆ ಹಾಗೂ ಮಠಗಳಿಗೆ, ಇತರೆ ಸಂಸ್ಥೆಗಳಿಗೆ ಒಟ್ಟು ಸುಮಾರು 1,945 ಎಕರೆ ಮಂಜೂರು ಮಾಡಲಾಗಿದೆ ಎಂದರು.

ನಿರ್ದಿಷ್ಟ ಉದ್ದೇಶಕ್ಕಾಗಿ ಪಡೆದ ಸರಕಾರಿ ಜಮೀನನ್ನು ಉಪಯೋಗ ಮಾಡಿಕೊಳ್ಳದಿದ್ದರೆ ಮತ್ತು ಷರತ್ತು ಉಲ್ಲಂಘಿಸಿದರೆ ಜಮೀನನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದರು.

ಮುಂದುವರೆದು, ಗುತ್ತಿಗೆ ನೀಡಿರುವ ಸರಕಾರಿ ಜಮೀನುಗಳನ್ನು ಪ್ರಕರಣವಾರು ಪರಾಮರ್ಶಿಸಿ, ಗುತ್ತಿಗೆ ಷರತ್ತುಗಳು ಪಾಲನೆಯಾಗಿರುವ ಬಗ್ಗೆ, ಗುತ್ತಿಗೆ ಹಣ ಕಾಲ ಕಾಲಕ್ಕೆ ಪಾವತಿಸಿರುವ ಬಗ್ಗೆ, ಗುತ್ತಿಗೆ ಮುಗಿದಿರುವ ಪ್ರಕರಣಗಳಲ್ಲಿ ಸರಕಾರಿ ಜಮೀನು ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಪರಾಮರ್ಶಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಭೂ ಮಂಜೂರಾತಿಯಾದ ಪ್ರಕರಣಗಳಲ್ಲಿಯೂ ಸಹ ಮಂಜೂರಾತಿ ಷರತ್ತು ಮತ್ತು ನಿಬಂಧನೆಗಳು ಪಾಲನೆಯಾಗಿರುವ ಬಗ್ಗೆ ಪರಾಮರ್ಶಿಸಿ, ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News